Kalaburagi | ರೋಗನಿರ್ಣಯದಲ್ಲಿ ರೇಡಿಯಾಲಜಿ ತಂತ್ರಜ್ಞಾನದ ಮಹತ್ವ ಹೆಚ್ಚುತ್ತಿದೆ: ಡಾ.ಸುಧೀರ್ ಕಾಳೆ

ಕಲಬುರಗಿ: ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ರೋಗಗಳ ನಿಖರ ಹಾಗೂ ತ್ವರಿತ ರೋಗನಿರ್ಣಯದಲ್ಲಿ ರೇಡಿಯಾಲಜಿ ವಿಭಾಗದ ಮಹತ್ವ ಹೆಚ್ಚುತ್ತಿದೆ ಎಂದು ಕರ್ನಾಟಕ ರಾಜ್ಯ ಇಂಡಿಯನ್ ರೇಡಿಯೋಲಾಜಿಕಲ್ ಆ್ಯಂಡ್ ಇಮೇಜಿಂಗ್ ಅಸೋಸಿಯೇಷನ್ (IRIA) ಅಧ್ಯಕ್ಷ ಡಾ. ಸುಧೀರ್ ಕಾಳೆ ಹೇಳಿದರು.
ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಆರ್‌ಐಎ ಕರ್ನಾಟಕ ರಾಜ್ಯ ಅಧ್ಯಾಯ ಹಾಗೂ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ರೇಡಿಯಾಲಜಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘From Probe to Practice – Radiology Live’ ವಿಶೇಷ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.
ರೇಡಿಯಾಲಜಿ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ಅತ್ಯಾಧುನಿಕ ಅಲ್ಟ್ರಾಸೌಂಡ್, ಸೋನೋಗ್ರಫಿ, ಡಾಪ್ಲರ್ ಹಾಗೂ ವಿವಿಧ ಇಮೇಜಿಂಗ್ ತಂತ್ರಜ್ಞಾನಗಳ ಕುರಿತು ವಿವರಿಸಿದ ಅವರು, ಆಧುನಿಕ ತಂತ್ರಜ್ಞಾನಗಳು ಕೇವಲ ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತವಾಗದೆ, ರೋಗಿಯ ಪರೀಕ್ಷೆಯಿಂದ ಆರಂಭಿಸಿ ನಿಖರ ಚಿತ್ರಣ ಪಡೆಯುವುದು, ವೈಜ್ಞಾನಿಕವಾಗಿ ವಿಶ್ಲೇಷಿಸುವುದು ಹಾಗೂ ಅಂತಿಮ ರೋಗನಿರ್ಣಯಕ್ಕೆ ನೆರವಾಗುವವರೆಗೆ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ರೋಗನಿರ್ಣಯದ ನಿಖರತೆ ಹಾಗೂ ವೇಗ ಹೆಚ್ಚಿಸುವಲ್ಲಿ ಆಧುನಿಕ ರೇಡಿಯಾಲಜಿ ತಂತ್ರಜ್ಞಾನಗಳು ಅತ್ಯಂತ ಮಹತ್ವದ್ದಾಗಿವೆ. ವೈದ್ಯರು ಹೊಸ ತಂತ್ರಜ್ಞಾನಗಳು ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ನಿರಂತರವಾಗಿ ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತವೆ ಎಂದು ಹೇಳಿದರು.
ಇದೇ ವೇಳೆ ಐಆರ್‌ಐಎ ಕರ್ನಾಟಕ ರಾಜ್ಯ ಅಧ್ಯಾಯದ ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಅವರು, ರಾಜ್ಯ ಅಧ್ಯಾಯವು ರೇಡಿಯಾಲಜಿಸ್ಟ್‌ಗಳ ಅಧಿಕೃತ ನೋಂದಾಯಿತ ಸಂಘಟನೆಯಾಗಿದ್ದು, ಸದಸ್ಯರಿಗಾಗಿ ನಿರಂತರವಾಗಿ ಶೈಕ್ಷಣಿಕ ಕಾರ್ಯಕ್ರಮಗಳು, ವೈದ್ಯಕೀಯ ಸಮ್ಮೇಳನಗಳು ಹಾಗೂ ವಿವಿಧ ವೃತ್ತಿಪರ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕ ಹಾಗೂ ಆಡಳಿತ ಮಂಡಳಿ ಸದಸ್ಯ ಡಾ. ಶರಣಬಸಪ್ಪ ಹರವಾಳ ಮಾತನಾಡಿದರು. ಮಹಾವಿದ್ಯಾಲಯದ ಡೀನ್ ಡಾ. ಶರಣಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಐಆರ್‌ಐಎ ರಾಜ್ಯ ಕಾರ್ಯದರ್ಶಿ ಡಾ. ವಿಜಯ ಸಾರಥಿ, ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಮೇಳಕುಂದಿ ಹಾಗೂ ಕೆಎಂಸಿ ವೀಕ್ಷಕ ಡಾ. ರಾಯಕೋಡ್ ಪಾಟೀಲ ವೇದಿಕೆಯಲ್ಲಿದ್ದರು. ಡಾ. ಶೃತಿ ಪಾಟೀಲ ಸ್ವಾಗತಿಸಿದರು. ಡಾ. ಸಂಜನಾ ದೇವರಮನಿ ಕಾರ್ಯಕ್ರಮ ನಿರೂಪಿಸಿದರು.






