ಕಲಬುರಗಿ | ಸಾಧಕಿಯರ ಜೀವನ ಎಲ್ಲರಿಗೂ ಆದರ್ಶ: ಲಕ್ಷ್ಮೀದೇವಿ ಕೋರವಿ

ಕಲಬುರಗಿ : ಇತಿಹಾಸ ಮತ್ತು ಸಮಕಾಲೀನ ಸಮಾಜಕ್ಕೆ ಮಹಿಳೆಯರು ನೀಡಿರುವ ಕೊಡುಗೆಯನ್ನು ತಿಳಿಸುವುದೇ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಎಂದು ಕೆಪಿಸಿಸಿ ಕಾರ್ಯದರ್ಶಿ ಲಕ್ಷ್ಮೀದೇವಿ ಮಂಜುನಾಥ ಕೋರವಿ ಹೇಳಿದರು.
ಚಿಂಚೋಳಿ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ (ರಿ ) ಚಿಂಚೋಳಿ ತಾಲೂಕು ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವಿಚಾರಗೋಷ್ಠಿ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಮಹಿಳೆಯರ ಜೀವನವನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಧರ್ಮಸ್ಥಳ ಸಂಸ್ಥೆಯು ಧಾರ್ಮಿಕ ಕಾರ್ಯದ ಜತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ ಸೃಷ್ಟಿಸುವ ಗುಡಿ ಕೈಗಾರಿಕೆಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ನಾಡಿನ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿರುವ ಸಂಸ್ಥೆಯ ಕಾರ್ಯ ಇತರರಿಗೆ ಮಾದರಿ ಎಂದರು.
ಜನಜಾಗೃತಿ ವೇದಿಕೆ ಕಲಬುರಗಿ ಉಪಾಧ್ಯಕ್ಷ ನರಸಮ್ಮ ಲಕ್ಷ್ಮಣ ಆವುಂಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕರು ಗಣಪತಿ ಮಾಳಂಜಿ, ತಾಲೂಕಿನ ಯೋಜನಾಧಿಕಾರಿಗಳಾದ ಗೋಪಾಲ್ ಜಿ ಉಮಾ ಪಾಟೀಲ್, ಮಾರುತಿ ಗಂಜಿಗೇರಿ, ಗೋಪಾಲ್ ಗಾರಂಪಳ್ಳಿ, ಘಾಳಮ್ಮ, ಸಂದ್ಯಾ ಪಾಟೀಲ್ , ರಾಧಾಬಾಯಿ ಓಲಗೇರಿ ವೇದಿಕೆಯಲ್ಲಿ ಇದ್ದರು.
ಮಹಿಳಾ ವಿಚಾರಗೋಷ್ಠಿಯ ವಿಷಯ :
ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಆಧುನಿಕ ಆಹಾರ ಪದ್ಧತಿ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀದೇವಿ ಎ ಪಾಟೀಲ್ ನಿವೃತ್ತ ಶಿಕ್ಷಕರು ಹಾಗೂ ಕವಿತಾ ಶಿಕ್ಷಕರು ಕರ್ನಾಟಕ ಪಬ್ಲಿಕ್ ಸ್ಕೂಲ್ ಇವರು ಸಂವಾದ ನಡೆಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ವೀರೇಂದ್ರ ಅಗ್ಗಿಮಠ ನಿರೂಪಿಸಿದರು, ಕೃಷಿ ಮೇಲ್ವಿಚಾರಕ ಸತೀಶ್ ಕೆ.ಎಚ್. ಸ್ವಾಗತಿಸಿದರು, ಸುಲೇಪೇಟೆ ವಲಯದ ಮೇಲ್ವಿಚಾರಕಿ ನಿಂಗಮ್ಮ ವಂದಿಸಿದರು .