ಕಲಬುರಗಿ | ಸಿಲಿಂಡರ್ ಬೆಲೆ ಹೆಚ್ಚಳದ ಕ್ರಮ ಕ್ರೂರ: ಕೆ.ನೀಲಾ

ಕಲಬುರಗಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಇತ್ತೀಚೆಗೆ ನಡೆದ ತೀವ್ರ ಏರಿಕೆಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಗೃಹಬಳಕೆ ಸಿಲಿಂಡರ್‌ಗಳ ಬೆಲೆಯಲ್ಲಿ 60 ರೂ. ಹೆಚ್ಚಳ ಮಾಡಿರುವುದು ಕ್ರೂರ ಕ್ರಮವಾಗಿದ್ದು, ಉಜ್ವಲ ಯೋಜನೆಯ ಬಡ ಫಲಾನುಭವಿಗಳ ಮೇಲೂ ಇದು ಹೆಚ್ಚುವರಿ ಹೊರೆ ತಂದಿದೆ ಎಂದು ಹೇಳಿದ್ದಾರೆ. ಅದೇ ವೇಳೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ 114.50 60 ರೂ. ಏರಿಕೆಯಾಗಿದೆ. ಈ ಹೆಚ್ಚಳದ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆಯೇ ಬೀಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇತ್ತೀಚಿನ ಬೆಲೆ ಏರಿಕೆಗಳ ನಡುವೆ ನೈಜ ಆದಾಯ ಕುಗ್ಗುತ್ತಿರುವ ಸ್ಥಿತಿಯಲ್ಲಿ ಮಧ್ಯಮ ವರ್ಗ ಮತ್ತು ದುಡಿಯುವ ಜನರ ಮೇಲೆ ಈ ನಿರ್ಧಾರ ಇನ್ನಷ್ಟು ಆರ್ಥಿಕ ಒತ್ತಡವನ್ನುಂಟು ಮಾಡಿದೆ ಎಂದು ಹೇಳಿದರು.
ಸಿಲಿಂಡರ್‌ಗಳ ಮೇಲಿನ ತೆರಿಗೆಯಿಂದ ಬರುತ್ತಿರುವ ಆದಾಯವನ್ನು ಕಡಿಮೆ ಮಾಡಲು ಸರ್ಕಾರ ನಿರಾಕರಿಸುತ್ತಿರುವುದು ಅದರ ಜನವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ಖಂಡಿಸಿದೆ.
ಪಶ್ಚಿಮ ಏಷ್ಯಾದ ಸಂಘರ್ಷವನ್ನು ಉಲ್ಲೇಖಿಸಿ ಅನಿಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಇದು ತನ್ನ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ಮಾತ್ರವಾಗಿದ್ದು, ಜಾಗತಿಕ ರಾಜಕೀಯ ಹಿತಾಸಕ್ತಿಗಳಿಗೆ ಸರ್ಕಾರ ಮಣಿದಿರುವುದನ್ನು ಇದು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಮಾಡಲಾದ ಈ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಕೆ. ನೀಲಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.







