ಕಲಬುರಗಿ | ಮಹಿಳೆಯ ಕಣ್ಣೀರು ಒರೆಸುವುದು ಸಂಘಟನೆಯ ಧ್ಯೇಯ : ಪದ್ಮಿನಿ ಕಿರಣಗಿ

ಕಲಬುರಗಿ: ಅಫಜಲಪುರ ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 4ನೇ ತಾಲೂಕು ಮಟ್ಟದ ಸಮ್ಮೇಳನವನ್ನು ಜಿಲ್ಲಾ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಇದು ರಾಷ್ಟ್ರಮಟ್ಟದ ಸಂಘಟನೆಯಾಗಿದ್ದು, ದೇಶದಾದ್ಯಂತ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಹೆಣ್ಮಕ್ಕಳಿಗೆ ಅನ್ಯಾಯವಾದರೆ ಅದನ್ನು ಬಗೆಹರಿಸುವ ದೃಢ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ ಅವರು, ಮಹಿಳೆಯರು ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಮುಂದಿನ ಜೀವನ ಸುಧಾರಿಸಬಹುದು” ಎಂದು ಹೇಳಿದರು.
ದೇಶದಲ್ಲಿ ಪ್ರತಿದಿನ 15 ನಿಮಿಷಕ್ಕೆ ಒಂದು ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಗಂಭೀರ ಸ್ಥಿತಿಗತಿಗಳ ವಿರುದ್ಧ ಸಂಘಟನೆಯ ಮೂಲಕ ಹೋರಾಟ ಅಗತ್ಯವಾಗಿದೆ. ಮಹಿಳೆಯರು ಸಂಘಟನೆಯ ಸದಸ್ಯತ್ವ ಪಡೆದು ಸ್ವಯಂ ಬಲಿಷ್ಠರಾಗಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಅಧ್ಯಕ್ಷೆ ಬಸಮ್ಮಾ ಗುತ್ತೇದಾರ ಅವರು ಮಾತನಾಡುತ್ತಾ, “ಇಂದಿನ ಪರಿಸ್ಥಿತಿಯಲ್ಲಿ ಮಹಿಳೆಯರು ಸುರಕ್ಷಿತವಾಗಿ ಬದುಕಲು ಸಂಘಟನೆ ಬೆನ್ನಾಗಿ ನಿಲ್ಲಬೇಕು. ಸಂಘಟನೆಯು ಯಾವುದೇ ಲಾಭದಾಸೆ ಇಲ್ಲದೆ ಸದಸ್ಯರ ಸಹಕಾರದಿಂದ ಕಾರ್ಯಚರಿಸುತ್ತದೆ. ಗಂಡ ಕುಡಿದು ದೌರ್ಜನ್ಯ ಮಾಡಿದರೆ, ಸಂಘಟನೆ ತಕ್ಷಣ ನೆರವಿಗೆ ಬರುತ್ತದೆ,” ಎಂದು ಹೇಳಿದರು.
ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ಶ್ರೀಮಂತ ಬಿರಾದಾರ, ಸಿಐಟಿಯು ಜಿಲ್ಲಾ ಅಧ್ಯಕ್ಷೆ ಶಾಂತಾ ಘಂಟೆ, ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಗುರು ಚಾಂದಕವಟೆ, ಶಶಿಕಲಾ ಪಾಟೀಲ ಮಾತನಾಡಿದರು.
ಜ್ಯೋತಿ ರಾಠೋಡ ಅವರು ನಿರೂಪಿಸಿ ವಂದಿಸಿದರು.







