Kalaburagi | ‘ಭವರಿ’ ಕಥಾಗುಚ್ಛವು ಸ್ತ್ರೀಸಂವೇದನೆಯ ಪ್ರತೀಕ : ಡಾ.ಕಾವ್ಯಶ್ರೀ ಮಹಾಗಾಂವಕರ್

ಕಲಬುರಗಿ : ಸಣ್ಣ ಕಥೆಗಳು ಕಾಲಮಾನದ ಪ್ರತಿಬಿಂಬಗಳಾಗಿದ್ದು, ಬಿ.ಜೆ.ಪಾರ್ವತಿ ಸೋನಾರೆ ಅವರ ‘ಭವರಿ’ ಕಥಾಸಂಕಲನವು ಅದಕ್ಕೆ ಹೊರತಾಗಿಲ್ಲ ಎಂದು ಲೇಖಕಿ ಡಾ.ಕಾವ್ಯಶ್ರೀ ಮಹಾಗಾಂವಕರ್ ಅಭಿಪ್ರಾಯಪಟ್ಟರು.
ನಗರದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುತ್ತಿರುವ ಸ್ತ್ರೀ ಶೋಷಣೆ, ಅನ್ಯಾಯ ಹಾಗೂ ಅತ್ಯಾಚಾರದಂತಹ ಘಟನೆಗಳನ್ನು ಲೇಖಕಿ ಪಾತ್ರ ನಿರ್ಮಾಣ, ವಸ್ತು ನಿರ್ವಹಣೆ, ಸಂಭಾಷಣೆ ಹಾಗೂ ಸ್ಥಳೀಯ ಭಾಷೆಯ ಬಳಕೆಯ ಮೂಲಕ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.
ಬೀದರ್ ಮತ್ತು ವಿಜಯಪುರ ಭಾಗದ ಭಾಷಾ ಸೊಗಡನ್ನು ಕಥೆಗಳಲ್ಲಿ ಸಮರ್ಪಕವಾಗಿ ಬಳಸಿರುವುದರಿಂದ ಕಥೆಗಳ ಮೆರಗು ಹೆಚ್ಚಾಗಿದೆ ಎಂದರು.
ಅವರು ಮುಂದುವರಿದು, ಒಬ್ಬ ಉತ್ತಮ ಕಥೆಗಾರ್ತಿಗೆ ಅಗತ್ಯವಾದ ಕಲಾ ಕೌಶಲ್ಯ ಮತ್ತು ಪ್ರತಿಭೆಯ ಕೊರತೆ ಕೆಲವು ಅಂಶಗಳಲ್ಲಿ ಕಾಣಿಸಿಕೊಂಡರೂ, ಈ ಸಂಕಲನದ ಐದು ಕಥೆಗಳು ಸ್ತ್ರೀಸಂವೇದನೆಯಿಂದ ತುಂಬಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ವಹಿಸಿದ್ದರು. ಡಾ.ಶ್ರೀಶೈಲ ನಾಗರಾಳ ಮತ್ತು ಡಾ. ಸಂಗನಗೌಡ ಹಿರೇಗೌಡ ಪ್ರತಿಕ್ರಿಯೆ ನೀಡಿದರು. ಡಾ.ವಿಜಯಕುಮಾರ ಪರುತೆ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಬಿ.ಹೆಚ್. ನಿರಗುಡಿ, ಡಾ. ಗವಿಸಿದ್ಧಪ್ಪ ಪಾಟೀಲ್, ಡಾ. ಶಿವಶರಣಪ್ಪ ದಾಬಾ, ಡಾ. ಶೀಲಾದೇವಿ ಬಿರಾದಾರ, ನೀಲಮ್ಮ ನೆಲೋಗಿ, ಡಾ. ಜಯದೇವಿ ಗಾಯಕವಾಡ, ಡಾ. ಸಿದ್ಧಪ್ಪ ಹೊಸಮನಿ, ಎಸ್.ಎಸ್. ಪಾಟೀಲ್, ರೇವಣಸಿದ್ಧಪ್ಪ ದುಕಾನ, ಡಾ. ಪೀರಪ್ಪ ಸಜ್ಜನ, ವಿಶ್ವನಾಥ ಭಕರೆ, ಸಿ.ಎಸ್. ಮಾಲಿಪಾಟೀಲ್, ಭೀಮಶೆಟ್ಟಿ ಮುಕ್ಕಾ, ಶಿವಾನಂದ ಮಠಪತಿ, ಎಸ್.ಎಸ್. ಹೂಗಾರ, ರಾಜೇಂದ್ರ ಝಳಕಿ ಹಾಗೂ ಸಿದ್ಧರಾಮ ಸರಸಂಬಿ ಉಪಸ್ಥಿತರಿದ್ದರು.






