ಕಲಬುರಗಿ | ವ್ಯಕ್ತಿಯ ಸಾಮಾಜಿಕ ವಿಕಸನಕ್ಕೆ ರಂಗಭೂಮಿ ಸಹಕಾರಿ : ಪ್ರೊ.ರಮೇಶ ಲಂಡನಕರ್

ಕಲಬುರಗಿ: ಸಮಾಜದ ಓರೆಕೊರೆಗಳನ್ನು ತಿದ್ದಿ ವ್ಯಕ್ತಿಯ ಸಾಮಾಜಿಕ ವಿಕಸನಕ್ಕೆ ರಂಗಭೂಮಿ ದೊಡ್ಡ ಸಹಾಯವಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನಕರ್ ಹೇಳಿದರು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಬುರಗಿ ರಂಗಾಯಣ ಸಂಯುಕ್ತಾಶ್ರಯದಲ್ಲಿ, ರಂಗಭೀಷ್ಮ ಬಿ.ವಿ. ಕಾರಂತ ಅವರ ಜನ್ಮದಿನದ ಅಂಗವಾಗಿ ರಂಗಾಯಣ ಸಭಾಂಗಣದಲ್ಲಿ “ಕಾರಂತರ ರಂಗನಿನಾದ” ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಗಾರಿ ಬಾರಿಸಿ ಉದ್ಘಾಟಿಸಲಾಯಿತು.
ಪ್ರೊ.ರಮೇಶ್ ಲಂಡನಕರ್ ಅವರು, “ಪ್ರತಿಭೆ ಅನಾವರಣ ಹಾಗೂ ಸಮಾಜ ತಿದ್ದುವಲ್ಲಿ ರಂಗಭೂಮಿ ಅತ್ಯುತ್ತಮ ವೇದಿಕೆ. ಜೀವನದ ಮೌಲ್ಯ ತಿಳಿಸುವ ರಂಗಭೂಮಿಯನ್ನು ಉಳಿಸಿ ಬೆಳಸುವುದು ನಮ್ಮ ಕರ್ತವ್ಯ” ಎಂದರು.
ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು, ಯುವ ಕಲಾವಿದರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ರಂಗಾಯಣದಿಂದ ಕಾರ್ಯಕ್ರಮಗಳು ರೂಪಿಸಬೇಕು. ಹಳ್ಳಿಗಳತ್ತ ರಂಗಾಯಣ ಹೆಜ್ಜೆ ಇಡಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕ ರಾಘವ ಕಮ್ಮಾರ ಅವರು ಕಾರಂತರ ಬದುಕು ಮತ್ತು ಸಾಧನೆಗಳ ಕುರಿತಾಗಿ ಸಂಗೀತ ಪ್ರಾತ್ಯಕ್ಷಿಕೆ ನೀಡಿದರು. ಕಾಲೇಜು ಮಟ್ಟದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 13 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಡಾ. ರಮೇಶ್ ಕುಲಕರ್ಣಿ, ಸಹಾಯಕ ನಿರ್ದೇಶಕಿ ಜಗದೇಶ್ವರಿ ನಾಶಿ, ರಂಗಾಯಣ ಆಡಳಿತಾಧಿಕಾರಿ ಸಿದ್ರಾಮ ಸಿಂದೆ, ನಿರೂಪಕ ಕಪಿಲ್ ಚಕ್ರವರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







