ಕಲಬುರಗಿ | ಕಳ್ಳತನ ಪ್ರಕರಣ ; ಆರೋಪಿಯ ಬಂಧನ, 30 ಲಕ್ಷ ರೂ. ಮೌಲ್ಯದ 412 ಗ್ರಾಂ ಬಂಗಾರ ಜಪ್ತಿ : ಪೊಲೀಸ್ ಕಮಿಷನರ್

ಕಲಬುರಗಿ : 260ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಬಂಧಿಸಿ, ಆತನಿಂದ ಒಟ್ಟು 10 ಪ್ರಕರಣಗಳಿಂದ 30 ಲಕ್ಷ ರೂ. ಮೌಲ್ಯದ 412 ಗ್ರಾಂ. ಬಂಗಾರದ ಆಭರಣಗಳ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಇಲ್ಲಿನ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ತೆಲಂಗಾಣ ರಾಜ್ಯದ ಸಿಕಿಂದ್ರಬಾದ್ ನಗರದ ಶಿವಪ್ರಸಾದ ಅಲಿಯಾಸ್ ಮಂತ್ರಿ ಶಂಕರ ತಂದೆ ಆಧಿನಾರಾಯಣ ಮಂತ್ರಿ (56) ಬಂಧಿತ ಆರೋಪಿ. ಈತನ ಮೇಲೆ ತೆಲಂಗಾಣದಲ್ಲೇ 250 ಕಳ್ಳತನ ಪ್ರಕರಣಗಳು ದಾಖಲಾಗಿವೆ. 4 ಬಾರಿ ಪಿ.ಡಿ ಆಕ್ಟ್ ಕಾಯ್ದೆ ಅಡಿಯಲ್ಲಿ ಬಂಧಿಸಿ 4 ವರ್ಷ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಎಂದು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎರಡು ವಾರಗಳ (ಎ.10ರಂದು) ಹಿಂದಷ್ಟೇ ಭಾಗ್ಯವಂತಿ ನಗರ ನಿವಾಸಿ ಶಂಕರಗೌಡ ಬಮಶೆಟ್ಟಿ ಎಂಬಾತರು ತಮ್ಮ ಮನೆಯಲ್ಲಿ 13 ಲಕ್ಷ ಮೌಲ್ಯದ ಬಂಗಾರ ಮತ್ತು 1 ಲಕ್ಷ 50 ಸಾವಿರ ರೂ. ಹಣ ಕಳ್ಳತನವಾಗಿದೆ ಎಂದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಇದೇ ಠಾಣೆಯಲ್ಲೇ ದಾಖಲಾದ ಒಟ್ಟು 9 ಪ್ರಕರಣ ಮತ್ತು ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ 1 ಪ್ರಕರಣಗಳ ಒಟ್ಟು 30 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸಂಶಯಾತ್ಮಕವಾಗಿ ತಿರುಗಾಡುತ್ತಿದ್ದ ತೆಲಂಗಾಣ ಮೂಲದ ಆರೋಪಿ ಶಿವಪ್ರಸಾದ ನನ್ನು ವಿಚಾರಿಸಿದಾಗ ರಾಮ ಮಂದಿರ ಹತ್ತಿರ ಇರುವ ಜೀವಾ ಆಸ್ಪತ್ರೆ ಹಿಂದಿನ ಬಡಾವಣೆ ಭಾಗ್ಯವಂತಿ ನಗರದಲ್ಲಿ ರಾತ್ರಿ ವೇಳೆಯಲ್ಲಿ ಹಲವು ಕಳ್ಳತನಗಳನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಕಳ್ಳತನ ಮಾಡಿದ 10 ಪ್ರಕರಣಗಳ ಸ್ವತ್ತನ್ನು ಕಲಬುರಗಿಯ ಐಯ್ಯರವಾಡಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಮುಚ್ಚಿಟ್ಟಿದ್ದು ಉಳಿದ ಪ್ರಕರಣಗಳ ಕಳ್ಳತನ ಸ್ವತ್ತನ್ನು ಮಾರಾಟ ಮಾಡಿ, ಗುಡಿ ಗುಂಡಾರಗಳ ಜಾತ್ರೆಯಲ್ಲಿ ಸಾರ್ವಜನಿಕರಿಗೆ ಊಟ ಹಾಕುವುದು, ದೊಡ್ಡ ನಗರಗಳಿಗೆ ಹೋಗಿ ಮೋಜು-ಮಸ್ತಿ ಮಾಡುವುದು, ಡ್ಯಾನ್ಸ್ ಕ್ಲಬ್‌ಗಳಿಗೆ ಹೋಗಿ ಹಣವನ್ನು ಖರ್ಚು ಮಾಡಿರುವುದಾಗಿ ಹೇಳಿದ್ದಾನೆಂದು ಕಮಿಷನರ್ ಡಾ.ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.
ಸದರಿ ಕಳ್ಳತನ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ, ಅವರಿಗೆ ಪ್ರಶಂಸನಾ ಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಇದ್ದರು.







