ಕಲಬುರಗಿ | ಮುಸ್ಲಿಮರ ಸಾಮೂಹಿಕ ನರಮೇಧ ನಡೆಸುವ ಬೆದರಿಕೆ : ಕ್ಷಮೆಯಾಚಿಸಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್

ಮಣಿಕಂಠ ರಾಠೋಡ್
ಕಲಬುರಗಿ : ಕಲಬುರಗಿಯಲ್ಲಿ ಪೊಲೀಸರನ್ನು 15-20 ನಿಮಿಷ ತಡೆ ಹಿಡಿದರೆ, ಮುಸ್ಲಿಮರನ್ನು ನಮ್ಮ ಬೋರಮಾಠಿ ಸಮುದಾಯದಿಂದ ಸಾಮೂಹಿಕವಾಗಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನನ್ನ ಹೇಳಿಕೆಯಿಂದ ಮುಸ್ಲಿಂ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಮಣಿಕಂಠ ರಾಠೋಡ್ ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಕೆಲ ದಿನಗಳ ಹಿಂದೆಯಷ್ಟೇ ನಾನು ಮಾಡಿದ ವಿಡಿಯೋದಲ್ಲಿ ಕಾಂಗ್ರೆಸ್ ಸರಕಾರ ಬಂದ 2 ವರ್ಷಗಳಲ್ಲಿ ನಮ್ಮ ಸಮುದಾಯದ ಸಹೋದರಿಯರ ಮೇಲೆ ಅತ್ಯಾಚಾರ, ಲವ್ ಜಿಹಾದ್ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸರು ವಿಫಲರಾಗಿದ್ದಾರೆ. ಪೊಲೀಸರನ್ನು 15-20 ನಿಮಿಷ ತಡೆ ಹಿಡಿದರೆ, ಲವ್ ಜಿಹಾದ್ ಮಾಡುವ ವ್ಯಕ್ತಿಗಳನ್ನು ಸಂಪೂರ್ಣ ಸ್ವಚ್ಛ ಮಾಡುವುದಾಗಿ ಹೇಳಿದ್ದೇನೆ ವಿನಃ ಮುಸ್ಲಿಂರನ್ನು ಹತ್ಯೆ ಮಾಡುವುದಾಗಿ ಹೇಳಿಲ್ಲ ಎಂದು ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಗರು ಹಿಂದೂ ಮುಸ್ಲಿಂರ ಮಧ್ಯೆ ಜಗಳ ಹಚ್ಚಲು ನನ್ನ ವಿರುದ್ಧ ವಿಷಬೀಜ ಬಿತ್ತಿದ್ದಾರೆ. ಮುಸಲ್ಮಾನರನ್ನು ಹತ್ಯೆ ಮಾಡುವುದಾಗಿ ನಾನು ಹೇಳಲಿಲ್ಲ. ನಾನು ಏಕೆ ಅವರನ್ನು ಹತ್ಯೆ ಮಾಡಲಿ. ಅಹಿಂಸೊ ಪರಮೋ ಧರ್ಮ ಎನ್ನುವುದು ನನ್ನ ಧರ್ಮವಾಗಿದೆ, ಹಿಂಸೆ ಮಾಡುವುದು ನನ್ನ ಧರ್ಮದಲ್ಲಿ ಬರೆದಿಲ್ಲ. ನಾನು ಎಲ್ಲಿಯೂ ಇಸ್ಲಾಂ ಧರ್ಮದ ವಿರುದ್ಧ ಮಾತನಾಡಿಲ್ಲ. ಲವ್ ಜಿಹಾದ್ ವಿರುದ್ಧ ಮಾತನಾಡಿದ್ದೇನೆ. ನನ್ನ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್ ನವರು ವಿಷ ಬೀಜ ಬಿತ್ತಿದ ಕಾರಣಕ್ಕಾಗಿ ಮುಸ್ಲಿಂ ಬಾಂಧವರಲ್ಲಿ ಕ್ಷಮೆಯಾಚಿಸುತ್ತೇನೆ. ಆದರೆ ಲವ್ ಜಿಹಾದ್ ಮಾಡುವವರ ಬಳಿ ಕ್ಷಮೆ ಕೇಳಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ನಾನು ಎಂದಿಗೂ ಮುಸ್ಲಿಮರ ವಿರೋಧಿ ಅಲ್ಲ ಎಂದು ಹೇಳಿದ್ದಾರೆ.
ಮುಸಲ್ಮಾನರನ್ನು ಹಿಂದೂಗಳು ಯಾರೂ ಹತ್ಯೆ ಮಾಡಿಲ್ಲ, ಪ್ರವಾದಿ ಅವರನ್ನು ಮುಸಲ್ಮಾನರೇ ಹತ್ಯೆ ಮಾಡಿದ್ದಾರೆ ಎನ್ನುವ ಮೂಲಕ ಮಣಿಕಂಠ ರಾಠೋಡ್ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
ಕೆಲವು ವಾರಗಳ ಹಿಂದೆ ಮುಸ್ಲಿಂ ಸಮುದಾಯ ವಿರುದ್ಧ ಕೋಮು ಪ್ರಚೋದನೆ ಹೇಳಿಕೆ ಕೊಟ್ಟಿರುವುದರಿಂದ ಸೆನ್ ಪೊಲೀಸ್ ಠಾಣೆ ಮತ್ತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.







