Kalaburagi | ನ. 24ರಿಂದ ಮೂರು ದಿನಗಳ ‘ನಾಟಕ ರಂಗೋತ್ಸವ’ : ಸುನೀಲ ಮಾನಪಡೆ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಗರದ ಐದು ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24ರಿಂದ 26ರವರೆಗೆ ಮೂರು ದಿನಗಳ ‘ನಾಟಕ ರಂಗೋತ್ಸವ’ ಆಯೋಜಿಸಲಾಗಿದೆ ಎಂದು ಆಯೋಜಕರಾದ ಸುನೀಲ ಮಾನಪಡೆ ತಿಳಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಆರ್ಟ್ ಥಿಯೇಟರ್, ಸೂರ್ಯನಗರಿ ಸಾಂಸ್ಕೃತಿಕ ಸೇವಾ ಸಂಘ, ಸಂಸ್ಕಾರ ಪ್ರತಿಷ್ಠಾನ, ಜನಪ್ರಿಯ ಸಾಂಸ್ಕೃತಿಕ ಕಲಾ ಸಂಘ ಹಾಗೂ ಪಂಚಶೀಲ ಸೇವಾ ಸಂಸ್ಥೆಗಳು ಜಂಟಿಯಾಗಿ ನಾಡಹಬ್ಬದ ಪ್ರಯುಕ್ತ ಈ ರಂಗೋತ್ಸವವನ್ನು ಆಯೋಜಿಸಿವೆ ಎಂದರು.
ನವೆಂಬರ್ 24ರಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ರಂಗೋತ್ಸವ ಉದ್ಘಾಟಿಸುವರು. ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಶರಣು ಮೋದಿ, ಸಿದ್ಧಾರ್ಥ ಬಸರಿಗಿಡ, ಶೌಕತ್ ಅಲಿ ಆಲೂರು, ಆರ್.ಜಿ. ಶೆಟಕಾರ್ ಹಾಗೂ ದತ್ತಾತ್ರೇಯ ಇಕ್ಕಳಕಿ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೊನ್ನದ ಪೂಜ್ಯಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು. ಬಳಿಕ ಬೆಂಗಳೂರಿನ ಜಂಗಮ ಕಲೆಕ್ಷನ್ ತಂಡದಿಂದ ‘ಕಾಕ್ರೋಚ್ ಅಂಡ್ ಕಂಫರ್ಟ್’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ನವೆಂಬರ್ 25ರಂದು ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸುವರು. ವಿಜಯಕುಮಾರ ಸೋನಾರೆ, ಪ್ರಭಾಕರ ಜೋಶಿ, ಡಾ. ಎಸ್.ಎಸ್. ಗುಬ್ಬಿ, ಸೂರ್ಯಕಾಂತ ಸುಜ್ಯಾತ್ ಹಾಗೂ ರೇಣುಕಾ ಡಂಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕಥೆಗಾರ್ತಿ ಸಂಧ್ಯಾ ಹೊನಗುಂಟಿಕರ್, ಡಾ. ಕೆ. ಲಿಂಗಪ್ಪ, ಅಶೋಕ ಶಟಕಾರ ಮತ್ತು ವಿಶ್ವರಾಜ ಪಾಟೀಲ ಅವರಿಗೆ ಗೌರವ ಸಲ್ಲಿಸಲಾಗುವುದು. ಬಳಿಕ ಬಹುಮುಖಿ ರಂಗ ಸಂಸ್ಥೆಯ ‘ಶ್ರದ್ಧಾ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ನವೆಂಬರ್ 26ರಂದು ನಡೆಯುವ ಸಮಾರೋಪ ಸಮಾರಂಭವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಅಕ್ಕಿನಿ ಬಿ. ಜಾನ್ ಉದ್ಘಾಟಿಸುವರು. ಬಿ.ಎಚ್. ನೀರಗುಡಿ, ಮಹಾಂತೇಶ ನವಲಕಲ್, ದತ್ತಾತ್ರೇಯ ಕುಡಕಿ, ಸೇವಂತಾಬಾಯಿ ಚೌಹಾಣ, ವಿದ್ಯಾಧರ ಕಾಂಬಳೆ ಹಾಗೂ ಮಾಲಾ ಕಣ್ಣಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಕಲಾವಿದ ಶ್ರೀಶೈಲ್ ಗೂಳಿ ಹಾಗೂ ರಂಗ ಶಿಕ್ಷಕರಾದ ಸಿದ್ಧರಾಮ ರಾಜಮಾನೆ ಮತ್ತು ಅಶೋಕ ತೊಟ್ನಳ್ಳಿ ಅವರಿಗೆ ವಿಶೇಷ ರಂಗ ಗೌರವ ನೀಡಲಾಗುವುದು. ಬಳಿಕ ‘ಮಾತೋಶ್ರೀ ರಮಾಬಾಯಿ ಅಂಬೇಡ್ಕರ್’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಂತವೀರ ಮಠಪತಿ, ಸುರೇಶ ಬೂನಿ, ವಿಠ್ಠಲ ಚಿಕ್ಕಣಿ, ಸಿದ್ಧಲಿಂಗ ಬಾಳಾ, ವೆಂಕಟೇಶ ಚವ್ಹಾಣ ಹಾಗೂ ಸಮೀರ ಸುಭೇದಾರ ಉಪಸ್ಥಿತರಿದ್ದರು.






