Kalaburagi | ಮಲೇಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಶಹಾಬಾದ್ನ ಮೂವರು ಭಾರತಕ್ಕೆ ವಾಪಸ್

ಕಲಬುರಗಿ: ಉದ್ಯೋಗದ ಆಮಿಷಕ್ಕೆ ಒಳಗಾಗಿ ಮಲೇಷ್ಯಾಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಶಹಾಬಾದ್ನ ಮೂವರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಅವರನ್ನು ಭಾರತಕ್ಕೆ ಕರೆತರಲು ಸಮಾಜಸೇವಕ ಡಾ.ಫಾರೂಕ್ ಮಣ್ಣೂರ ನಡೆಸಿದ ಪ್ರಯತ್ನ ಫಲ ನೀಡಿದ್ದು, ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ.ಫಾರೂಕ್ ಮಣ್ಣೂರ ಅವರು, ಶಹಾಬಾದ್ನ ಮುಹಮ್ಮದ್ ನೂರುದ್ದೀನ್, ಮುಹಮ್ಮದ್ ಸಿರಾಜುದ್ದೀನ್ ಹಾಗೂ ಯೂಸುಫ್ ಖಾನ್ ಸುರಕ್ಷಿತವಾಗಿ ತವರಿಗೆ ಮರಳಿರುವುದನ್ನು ತಿಳಿಸಿದರು.
ದಲ್ಲಾಳಿಯೊಬ್ಬ ಕಾನೂನುಬದ್ಧ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟು, ಉತ್ತಮ ವೇತನದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೂವರನ್ನು ವಿದೇಶಕ್ಕೆ ಕರೆದೊಯ್ಯುವ ಆಮಿಷವೊಡ್ಡಿದ್ದಾನೆ. ಬಳಿಕ ಥಾಯ್ಲೆಂಡ್ನಿಂದ ಮಲೇಷ್ಯಾಕ್ಕೆ ಅಕ್ರಮವಾಗಿ ಸಾಗಿಸುವ ಉದ್ದೇಶದಿಂದ ರಾತ್ರಿ ವೇಳೆ ಹಡಗಿನ ಲಗೇಜ್ ಬಾಕ್ಸ್ನಲ್ಲಿ ಕೂರಿಸಿ ಕರೆದೊಯ್ದಿದ್ದಾನೆ ಎಂದು ತಿಳಿದುಬಂದಿದೆ.
ಮಲೇಷ್ಯಾ ತಲುಪಿದ ಬಳಿಕ ತಾವು ಅಕ್ರಮವಾಗಿ ದೇಶ ಪ್ರವೇಶಿಸಿರುವ ವಿಚಾರ ಮೂವರ ಗಮನಕ್ಕೆ ಬಂದಿದೆ. ತಕ್ಷಣ ಅವರು ತಮ್ಮ ಕುಟುಂಬಸ್ಥರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಬಳಿಕ ಅಲ್ಲಿನ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿರುವ ವಿಷಯವೂ ಕುಟುಂಬಸ್ಥರಿಗೆ ತಿಳಿದಿದೆ. ಇದರಿಂದ ಆತಂಕಗೊಂಡ ಕುಟುಂಬದವರು ಶಹಾಬಾದ್ನಿಂದ ಬಂದು ತಮ್ಮನ್ನು ಭೇಟಿಯಾಗಿ ನೆರವು ಕೋರಿದರು ಎಂದು ಡಾ.ಫಾರೂಕ್ ಮಣ್ಣೂರ ಅವರು ವಿವರಿಸಿದರು.
ಮೂವರು ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿಷಯ ತಿಳಿದ ತಕ್ಷಣ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಗಿತ್ತು. ಇದರೊಂದಿಗೆ ಮಲೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಕರ್ನಾಟಕ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಸಲ್ಲಿಸಿ ನೆರವು ಕೋರಲಾಗಿತ್ತು ಎಂದು ತಿಳಿಸಿದರು.
ಇದಲ್ಲದೆ, ದುಬೈ, ಗೋವಾ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಸಂಪರ್ಕಗಳ ಮೂಲಕವೂ ಮೂವರನ್ನು ತವರಿಗೆ ಕರೆತರಲು ಪ್ರಯತ್ನ ನಡೆಸಲಾಯಿತು. ಮಲೇಷ್ಯಾದಲ್ಲಿದ್ದ ಪರಿಚಯಸ್ಥರು ಕೂಡ ಸಹಕಾರ ನೀಡಿದರು. ಈ ಎಲ್ಲ ಪ್ರಯತ್ನಗಳ ಫಲವಾಗಿ ಮೂವರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿದೆ ಎಂದು ಹೇಳಿದರು.
ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತಮ್ಮ ಕುಟುಂಬದ ಸದಸ್ಯರು ಸುರಕ್ಷಿತವಾಗಿ ಮರಳಲಿ ಎಂದು ಆತಂಕದಿಂದ ಕಾಯುತ್ತಿದ್ದ ಕುಟುಂಬಸ್ಥರಿಗೆ ಈ ಬೆಳವಣಿಗೆ ನೆಮ್ಮದಿ ತಂದಿದೆ. ಸಂಕಷ್ಟದ ಸಂದರ್ಭದಲ್ಲಿ ನೆರವು ನೀಡಿದ ಎಲ್ಲರಿಗೂ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅನ್ವರ್ ಶಕೀಲ್, ಜಹೀರ್, ಅಲಿಂ ಇನಾಮದಾರ್, ನಿಜಾಂ, ನಿಸಾರ್, ಹಬೀಬ್, ಜಹೀರ್ ಪಟೇಗಾಂವ್, ಸಾಕಿಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






