ಕಲಬುರಗಿ | ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರ ಹತ್ಯೆ ಪ್ರಕರಣ: 10 ಮಂದಿ ಆರೋಪಿಗಳ ಬಂಧನ

ಕಲಬುರಗಿ : ನಗರದ ಹೊರವಲಯದ ಪಟ್ಟಣ ಗ್ರಾಮದ ಸಮೀಪದ ಡ್ರೈವರ್ ಧಾಬಾ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹತ್ಯೆಗೆ ಸಂಬಂಧಿಸಿದಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ 11 ಮಂದಿ ವಿರುದ್ಧ ದೂರು ದಾಖಲಾಗಿದ್ದು, 10 ಮಂದಿಯನ್ನು ವಶಕ್ಕೆ ಪಡೆದು, ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ತಿಳಿಸಿದೆ.
ಪಟ್ಟಣ ಗ್ರಾಮದ ನಾಗರಾಜ ತಂದೆ ಶಿವಪುತ್ರ ತಾಳಿಕೋಟಿ(23), ಈರಣ್ಣ ತಂದೆ ಶಿವಪುತ್ರ ತಾಳಿಕೋಟಿ(27), ಭೀರಣ್ಯ ತಂದೆ ಲಕ್ಷ್ಮಣ ಪೂಜಾರಿ (21), ಸಿದ್ದರೂಡ ತಂದೆ ಕಲ್ಯಾಣ ಹತಗುಂದಿ (22), ನಾಗರಾಜ ತಂದೆ ಶಶಿದರ ಬಿಸಗೊಂಡ(17), ತಂಬಾಕವಾಡಿ ಗ್ರಾಮದ ಪೀರೇಶ ತಂದೆ ಅಂಬಾರಾಯ ಹಡಪದ(35), ಪಟ್ಟಣ ಗ್ರಾಮದ ಸಾಗರ ತಂದೆ ಲಕ್ಷ್ಮಿಕಾಂತ ಪಾಟೀಲ (24), ರಾಚಣ್ಯ ಅಲಿಯಾಸ್ ಗಿಲ್ಲಿ ತಂದೆ ಬಸವರಾಜ ಮಾಲಿ ಪಾಟೀಲ(22), ಚಂದ್ರಕಾಂತ ತಂದೆ ಶಾಂತಪ್ಪ ಪೂಜಾರಿ(30), ಭಾಗ್ಯಶ್ರೀ ಗಂಡ ಸೋಮನಾಥ ತಾಳಿಕೋಟಿ (30) ಬಂಧಿತ ಆರೋಪಿಗಳಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರ ತಡರಾತ್ರಿ 1.30 ರ ಸುಮಾರಿಗೆ ಡ್ರೈವರ್ ಧಾಬಾಗೆ ನುಗ್ಗಿದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಹತ್ಯೆ ಮಾಡಿದ್ದರು. ಹಳೆಯ ದ್ವೇಷದ ಕಾರಣ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಕೆಲವೇ ಗಂಟೆಗಳಲ್ಲಿ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ.





