ಕಲಬುರಗಿ: ಕೆಬಿಎನ್ ವಿವಿಯಲ್ಲಿ ಮೂರು ವಾರಗಳ ಇಂಡಕ್ಷನ್ ಕಾರ್ಯಕ್ರಮ ಸಮಾರೋಪ

ಕಲಬುರಗಿ: ಸ್ಥಳೀಯ ಖಾಜಾ ಬಂದಾನವಾಜ (ಕೆಬಿಎನ್) ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ನಿಕಾಯದ ವತಿಯಿಂದ ಆಯೋಜಿಸಿದ್ದ ಮೂರು ವಾರಗಳ ಇಂಡಕ್ಷನ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಂಜಿನಿಯರಿಂಗ್ ನಿಕಾಯದ ಡೀನ್ ಡಾ. ಸುಭಾಷ್ ಕಮಲ್ ಮಾತನಾಡಿ, "ಇಂಜಿನಿಯರಿಂಗ್‌ನ ಎಲ್ಲ ವಿಭಾಗಗಳ ವಿದ್ಯಾರ್ಥಿಗಳನ್ನು ಭೇಟಿ ಮಾಡುತ್ತಿದ್ದೇನೆ. ಈ ವರ್ಷ ಹೊಸ ಪಠ್ಯಕ್ರಮಗಳನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧಿಸುವ ಗುರಿ ಹೊಂದಬೇಕು. ಬ್ಯಾಕ್‌ಲಾಗ್‌ಗಳಿಗೆ ಅವಕಾಶ ನೀಡಬಾರದು. ಕನಿಷ್ಠ 8 ಸಿಜಿಪಿಎ ಗಳಿಸುವತ್ತ ಗಮನ ಹರಿಸಬೇಕು. ತರಗತಿಗಳನ್ನು ತಪ್ಪಿಸದೆ ಶೇ.80ರಷ್ಟು ಹಾಜರಾತಿ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು" ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಾಯಕ ಡೀನ್ ಡಾ. ಮಾರುಫ್ ಮಾತನಾಡಿ, ಶಿಸ್ತುಬದ್ಧ ಕಲಿಕೆಯ ಮಹತ್ವವನ್ನು ವಿವರಿಸಿದರು. "ಉಪನ್ಯಾಸಕರನ್ನು ಗೌರವಿಸಬೇಕು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ತಮ್ಮ ವಿಭಾಗಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಂಶೋಧನಾ ಮನೋಭಾವವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ" ಎಂದರು.
ಕ್ಯಾಂಪಸ್ ಡೀನ್ ಡಾ. ಕಮಾಲ್ ಆಜಂ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಪದವಿ ಪೂರ್ಣಗೊಂಡ ಬಳಿಕ ಎಲ್ಲೆಡೆ ಕಾರ್ಯನಿರ್ವಹಿಸುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ. ದೇಶದ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ಕರೆ ನೀಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಬಂಧ ಹಾಗೂ ಅಡುಗೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಮದೀಹಾ, ಜೂಬೈರ್ ಅಹ್ಮದ್, ಸುಮಯ್ಯ ಹಾಗೂ ಮೊಹಿನುದ್ದೀನ್ ಖಾನ್ ಇಂಡಕ್ಷನ್ ಕಾರ್ಯಕ್ರಮದ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಶ್ರೀನಿವಾಸ್ ಮೂರು ವಾರಗಳ ಇಂಡಕ್ಷನ್ ಕಾರ್ಯಕ್ರಮದ ವರದಿ ವಾಚಿಸಿದರು. ಮೊಹಮ್ಮದ್ ರಾಜಾ ಪಟೀಲ್ ಅವರು ಖಿರಾಅತ್ ಪಠಿಸಿದರು. ಡಾ. ಮಲ್ಲನಗೌಡ ಸ್ವಾಗತಿಸಿದರು. ಡಾ. ನಸ್ರೀನ್ ವಂದಿಸಿದರು.






