Kalaburagi | ಶಾಲೆಯ ಎದುರು ಸ್ಪೀಡ್ ಬ್ರೇಕರ್ ನಿರ್ಮಿಸಲು ಟಿಪ್ಪು ಸುಲ್ತಾನ್ ವೆಲ್ಫೇರ್ ಸೊಸೈಟಿ ಆಗ್ರಹ

ಕಲಬುರಗಿ: ನಗರದ ಮದೀನಾ ಕಾಲೋನಿಯಲ್ಲಿರುವ ಕರ್ನಾಟಕ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ನಿರ್ಮಿಸುವಂತೆ ಟಿಪ್ಪು ಸುಲ್ತಾನ್ ವೆಲ್ಫೇರ್ ಸೊಸೈಟಿ ಆಗ್ರಹಿಸಿದೆ.
ಈ ಶಾಲೆಯಲ್ಲಿ ಸುಮಾರು 400ರಿಂದ 500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಎದುರಿನ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಇಲ್ಲದ ಕಾರಣ ವಾಹನಗಳು ಅತಿವೇಗವಾಗಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ತೀವ್ರ ತೊಂದರೆಯಾಗುತ್ತಿದೆ ಎಂದು ಸೊಸೈಟಿಯ ಸದಸ್ಯರು ಶಾಲೆಯ ಮುಖ್ಯಗುರುಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಇದೇ ಶಾಲೆಯ ಎದುರು ಅತಿವೇಗವಾಗಿ ಬಂದ ಭಾರಿ ವಾಹನವೊಂದು ಸಂಚರಿಸಿದ ಪರಿಣಾಮ ಸುಮಾರು ಐವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದ ಘಟನೆಯನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಜೀವಕ್ಕೆ ಹಾನಿಯಾದರೆ ಅಥವಾ ಅಪಘಾತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಸೊಸೈಟಿ ಪ್ರಶ್ನಿಸಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಾಲೆಯ ಎದುರಿನ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಿ, ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೊಸೈಟಿ ಒತ್ತಾಯಿಸಿದೆ.






