ಕಲಬುರಗಿ | ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆಗಳು ಉಂಟಾಗುತ್ತವೆ : ಗುರಯ್ಯಾ ಸ್ವಾಮಿ

ಕಲಬುರಗಿ: ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆಗಳು ಮತ್ತು ಶ್ವಾಸಕೋಶದ ತೊಂದರೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಯುವಕರಾದ ನೀವು ಈ ವ್ಯಸನದಿಂದ ದೂರವಿರಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಎಂದು ದಿಗಂಬರ್ ಜೈನ್ ಪ್ರೌಢಶಾಲೆ ಮುಖ್ಯ ಶಿಕ್ಷಕ, ಮರಾಠಿ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಗುರಯ್ಯಾ ಆರ್.ಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಆಳಂದ ಪಟ್ಟಣದ ದಿಗಂಬರ ಜೈನ ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಮೂಲಕ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವಂತೆ ಸಲಹೆ ನೀಡಿದ ಅವರು, ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ತಂಬಾಕಿನ ವಿರುದ್ಧ ಜಾಗೃತಿ ಮೂಡಿಸಬೇಕೆಂದು ಅವರು ಸಲಹೆ ನೀಡಿದರು.
ಧರ್ಮಸ್ಥಳ ಸಂಸ್ಥೆ ತಾಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಿಕಿ ಪ್ರಸ್ತಾವಿಕ ಮಾತನಾಡಿದರು.
ಜನ ಜಾಗೃತಿ ಉಪಾಧ್ಯಕ್ಷ ಶಾಂತಪ್ಪ ಕೋರೆ, ಸಂಪನ್ಮೂಲ ವ್ಯಕ್ತಿ ಅಪ್ಪಾಸಾಬ ತೀರ್ಥೆ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿ ವೈಶಾಲಿ ಪಾಟೀಲ್, ವಿಜಯ ಕಟಕೆ, ರಾಹುಲ್ ಜವಳೆ, ದೈಹಿಕ ಶಿಕ್ಷಕ ಸತೀಶ, ಸಂಸ್ಥೆಯ ಜ್ಞಾನವಿಕಾಸ ಸಮನ್ವಯ ಅಧಿಕಾರಿ ರೇಣುಕಾ ಹಿರೇಕುಡಿ, ಕೃಷಿ ಅಧಿಕಾರಿ ಸಂತೋಷ್ ರೆಡ್ಡಿ, ಸೇವಾಪ್ರತಿನಿಧಿ ಮಹಾನಂದ, ತಡಕಲ್‌ದ ಕಲ್ಯಾಣಿ ತುಕಾಣಿ ಮತ್ತು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.







