Kalaburagi | ಭಗತ್ ಸಿಂಗ್ ಹುತಾತ್ಮ ದಿನದ ಅಂಗವಾಗಿ ಪಂಜಿನ ಮೆರವಣಿಗೆ

ಕಲಬುರಗಿ : ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ 95ನೇ ಹುತಾತ್ಮ ದಿನಾಚರಣೆ ಅಂಗವಾಗಿ ಎಐಡಿವೈಓ ವತಿಯಿಂದ ಸೋಮವಾರ ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಬಡತನ, ನಿರುದ್ಯೋಗ, ಅಸಮಾನತೆ, ಕೋಮು ಹಾಗೂ ಜಾತಿ ವೈಷಮ್ಯಗಳಿಲ್ಲದ ಭಾರತವೇ ಭಗತ್ ಸಿಂಗ್ ಅವರ ಕನಸಾಗಿತ್ತು ಎಂದು ಹೇಳಿದರು.
ಇಂದಿನ ಪರಿಸ್ಥಿತಿಯಲ್ಲಿ ಈ ಸಮಸ್ಯೆಗಳು ಹೆಚ್ಚಾಗುತ್ತಿರುವುದರಿಂದ ಅವುಗಳ ವಿರುದ್ಧ ಹೋರಾಡಲು ಭಗತ್ ಸಿಂಗ್ ಅವರ ವಿಚಾರಧಾರೆ ಅತ್ಯಂತ ಅಗತ್ಯವಾಗಿದೆ. ಯುವಕರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಭಗತ್ ಸಿಂಗ್ ಅವರು ಕೇವಲ 23ನೇ ವಯಸ್ಸಿನಲ್ಲಿ ಅಪಾರ ಜ್ಞಾನ ಸಂಪಾದಿಸಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿಕಾರಿಯಾಗಿದ್ದು, ಯುವಕರು ಅವರಂತೆ ಅಧ್ಯಯನ ಮತ್ತು ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಜಗನ್ನಾಥ್ ಎಸ್.ಎಚ್ ಮಾತನಾಡಿ, 2004ರಲ್ಲಿ ಪದವೀಧರ ನಿರುದ್ಯೋಗ ಪ್ರಮಾಣ ಶೇ.32ರಷ್ಟು ಇತ್ತಾದರೆ, 2024ರಲ್ಲಿ ಅದು ಶೇ.67ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಯುವಜನರನ್ನು ಕಡೆಗಣಿಸಿದ್ದು, ಲಕ್ಷಾಂತರ ಪದವೀಧರರು ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸದಸ್ಯ ರಮೇಶ್ ದೇವಕರ್ ಪ್ರಸ್ತಾವಿಕವಾಗಿ ಮಾತನಾಡಿದರು. ಪಂಜಿನ ಮೆರವಣಿಗೆಯು ರೈಲು ನಿಲ್ದಾಣದಿಂದ ಪ್ರಾರಂಭವಾಗಿ ಎಸ್.ವಿ.ಪಿ ವೃತ್ತದಲ್ಲಿ ಸಮಾಪ್ತಿಯಾಯಿತು.
ಕಾರ್ಯಕ್ರಮದಲ್ಲಿ ರಘು ಪವಾರ್, ಪುಟ್ಟರಾಜ್, ಲಿಂಗ ಶೆಟ್ಟಿ, ಪ್ರಶಾಂತ್ ಹೊಸಮನಿ, ದೇವರಾಜ್ ಮಿರಲ್ಕರ್, ಶೇಖರ್ ಸಿಂಗ್, ಉಮೇಶ್ ಯಾದವ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಈಶ್ವರ್ ಕೆ ವಹಿಸಿದ್ದರು.







