Kalaburagi | ನವೀನ ಆಲೋಚನೆಗಳನ್ನು ಆವಿಷ್ಕಾರಗಳಾಗಿ ರೂಪಿಸಿ ಪೇಟೆಂಟ್ ಪಡೆಯಿರಿ: ಪ್ರೊ.ಬಟ್ಟು ಸತ್ಯನಾರಾಯಣ
‘ಬೌದ್ಧಿಕ ಆಸ್ತಿ ಮತ್ತು ನೈತಿಕತೆ’ ಕುರಿತ ರಾಷ್ಟ್ರೀಯ ಕಾರ್ಯಾಗಾರ

ಕಲಬುರಗಿ: ವಿದ್ಯಾರ್ಥಿಗಳು ತಮ್ಮ ನವೀನ ಆಲೋಚನೆಗಳನ್ನು ಆವಿಷ್ಕಾರಗಳಾಗಿ ರೂಪಿಸಿ, ಅವುಗಳಿಗೆ ಪೇಟೆಂಟ್‌ಗಳನ್ನು ಪಡೆಯುವ ಮೂಲಕ ಸ್ಟಾರ್ಟಪ್‌ಗಳನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಾನೂನು ಅಧ್ಯಯನ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಹಯೋಗದಲ್ಲಿ ಶುಕ್ರವಾರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬೌದ್ಧಿಕ ಆಸ್ತಿ ಮತ್ತು ನೈತಿಕತೆ’ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೌದ್ಧಿಕ ಆಸ್ತಿ ಹಕ್ಕುಗಳು ಮೂಲ ಆಲೋಚನೆಗಳು ಮತ್ತು ಆವಿಷ್ಕಾರಗಳಿಗೆ ಕಾನೂನು ರಕ್ಷಣೆ ಒದಗಿಸುವುದರ ಜೊತೆಗೆ ನಾವೀನ್ಯತೆಗೆ ಉತ್ತೇಜನ ನೀಡುತ್ತವೆ. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನೈತಿಕ ಸಂಶೋಧನಾ ಪದ್ಧತಿಗಳಿಗೆ ಆದ್ಯತೆ ನೀಡಬೇಕು. ತಮ್ಮ ಸಂಶೋಧನಾ ಫಲಿತಾಂಶಗಳನ್ನು ಸಮಾಜಕ್ಕೆ ಉಪಯುಕ್ತವಾದ ಉತ್ಪನ್ನಗಳು ಹಾಗೂ ಪರಿಹಾರಗಳಾಗಿ ಪರಿವರ್ತಿಸುವ ಮೂಲಕ ರಾಷ್ಟ್ರೀಯ ಅಭಿವೃದ್ಧಿ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಾಗಾರದ ಮುಖ್ಯ ಭಾಷಣ ಮಾಡಿದ ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್) ಹಿರಿಯ ಪ್ರಧಾನ ವಿಜ್ಞಾನಿ ಡಾ. ಕನಿಕಾ ಮಲಿಕ್ ಅವರು, ತಾಂತ್ರಿಕ ಪ್ರಗತಿ, ಆವಿಷ್ಕಾರಗಳಿಗೆ ಕಾನೂನು ರಕ್ಷಣೆ ಒದಗಿಸುವುದು ಹಾಗೂ ಅವುಗಳ ವಾಣಿಜ್ಯೀಕರಣದಲ್ಲಿ ಪೇಟೆಂಟ್‌ಗಳ ಮಹತ್ವವನ್ನು ವಿವರಿಸಿದರು.
ಐಕ್ಯೂಎಸಿ ನಿರ್ದೇಶಕರು ಹಾಗೂ ಎಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ. ಎಂ. ಅಮರೇಂದ್ರ ಮತ್ಸ ಮಾತನಾಡಿ, ವಿಕಸಿತ ಭಾರತ ನಿರ್ಮಾಣದಲ್ಲಿ ತಾಂತ್ರಿಕ ನಾವೀನ್ಯತೆ ಮತ್ತು ಪೇಟೆಂಟ್‌ಗಳ ಕುರಿತ ಅರಿವು ಪ್ರಮುಖ ಪಾತ್ರ ವಹಿಸುತ್ತವೆ. ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾನೂನು ಅಧ್ಯಯನ ನಿಕಾಯದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಅವರು ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು.
ಕಾರ್ಯಾಗಾರದಲ್ಲಿ ಎರಡು ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಮೊದಲ ಗೋಷ್ಠಿಯಲ್ಲಿ ಡಾ. ಕನಿಕಾ ಮಲಿಕ್ ಅವರು ‘ಪೇಟೆಂಟ್ ನೀತಿಶಾಸ್ತ್ರ: ಪೇಟೆಂಟ್ ಕರಡು ರಚನೆ ಮತ್ತು ಸಲ್ಲಿಕೆಯಲ್ಲಿನ ನೈತಿಕ ಪದ್ಧತಿಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಎಂ. ಅಮರೇಂದ್ರ ಮತ್ಸ ವಹಿಸಿದ್ದರು. ಭೌತ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ರಾಜೀವ್ ಜೋಶಿ ಸಹ-ಅಧ್ಯಕ್ಷರಾಗಿದ್ದರು.
ಎರಡನೇ ಗೋಷ್ಠಿಯಲ್ಲಿ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಅಶೋಕ್ ಪಿ. ವಾಡ್ಜೆ ಅವರು ‘ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ನೀತಿಶಾಸ್ತ್ರ: ಭಾರತದ ಕಾನೂನು ಚೌಕಟ್ಟು, ಸವಾಲುಗಳು ಮತ್ತು ಉತ್ತಮ ಪದ್ಧತಿಗಳು’ ಎಂಬ ವಿಷಯದ ಕುರಿತು ಮಾತನಾಡಿದರು. ಗಣಕ ವಿಜ್ಞಾನ ನಿಕಾಯದ ಡೀನ್ ಪ್ರೊ. ಆರ್. ಎಸ್. ಹೆಗಡೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ರಾಸಾಯನಿಕ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ಪಲ್ಲೆಪೋಗು ರಾಘವಯ್ಯ ಸಹ-ಅಧ್ಯಕ್ಷರಾಗಿದ್ದರು.
ಕಾರ್ಯಕ್ರಮದಲ್ಲಿ ಸಹ-ಸಂಯೋಜಕಿ ಜುನು ದಾಸ್, ಪ್ರೊ. ಪ್ರಮೋದ್ ಕುಮಾರ್, ಡಾ. ರೇಣುಕಾ ಗುಬ್ಬೇವಾಡ, ಡಾ. ಜಗದೀಶ್ ಚಂದ್ರ, ಡಾ. ವೈಷ್ಣವಿ ನಾರಾಯಣಿ, ಡಾ. ಕೃಷ್ಣ ಕುಮಾರ್ ಶರ್ಮಾ, ಡಾ. ತಿಲಕಾ, ಡಾ. ಗುರುರಾಜ ಮುಕರಂಬಿ, ಡಾ. ಮಯೂರ್ ಪೂಜಾರ್, ಡಾ. ಜಗದೀಶ್ ಬಿರಾದಾರ ಹಾಗೂ ಡಾ. ಮಲ್ಲಿಕಾರ್ಜುನ ಆನಂದ ಹಳ್ಳಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕಿ ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು. ಕಾನೂನು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಅನಂತ ಚಿಂಚುರೆ ವಂದಿಸಿದರು.






