Kalaburagi | ಕೆಡಿಎ 50:50 ಯೋಜನೆಯಡಿ 769 ನಿವೇಶನಗಳ ಪಾರದರ್ಶಕ ಲಾಟರಿ ಹಂಚಿಕೆ : ಶಾಸಕ ಬಸವರಾಜ ಮತ್ತಿಮಡು

ಕಲಬುರಗಿ : ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೆಡಿಎ) ವತಿಯಿಂದ ಡಾ. ಖಮರ್-ಉಲ್-ಇಸ್ಲಾಂ ಹಾಗರಗಾ 50:50 ರೈತರ ಸಹಭಾಗಿತ್ವದ ವಸತಿ ಯೋಜನೆಯಡಿ 769 ನಿವೇಶನಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಹಂಚಿಕೆ ಮಾಡಲಾಯಿತು.
ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಹಿಂದೆ ನಿವೇಶನ ಹಂಚಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದವು. ಆದರೆ, ಕೆಡಿಎ ಅಧ್ಯಕ್ಷ ಮಜಹರ್ ಆಲಂ ಖಾನ್ ನೇತೃತ್ವದಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೊಂಡಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸೈನಿಕರು, ಬಡವರು ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರದ ನಿಯಮಾನುಸಾರ ಆದ್ಯತೆ ಮತ್ತು ಸಬ್ಸಿಡಿ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದ ಅವರು, ಹಾಗರಗಾ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೆಡಿಎ ಅಧ್ಯಕ್ಷ ಮಜಹರ್ ಆಲಂ ಖಾನ್ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕಿ ಕನೀಜ್ ಫಾತಿಮಾ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಪ್ರಯತ್ನದಿಂದ ಯೋಜನೆಗೆ 2023ರ ನವೆಂಬರ್‌ನಲ್ಲಿ ಸಚಿವ ಸಂಪುಟದ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಯೋಜನೆಗೆ ಸಲ್ಲಿಕೆಯಾಗಿದ್ದ 6,253 ಅರ್ಜಿಗಳ ಪರಿಶೀಲನೆ ಬಳಿಕ 117 ಎಕರೆ 5 ಗುಂಟೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಯ 769 ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಲಾಟರಿ ಪ್ರಕ್ರಿಯೆ ಶಾಸಕರು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಎಸ್‌ಟಿ ವರ್ಗದಲ್ಲಿ ಸಂಗೀತಾ ಶರಣಪ್ಪ ಮೇತ್ರೆ, ಎಸ್‌ಸಿ ವರ್ಗದಲ್ಲಿ ಪ್ರೇಮಲತಾ ಹಾಗೂ ಸಾಮಾನ್ಯ ವರ್ಗದಲ್ಲಿ ಸಿದ್ಧಿಕ್ ಮಾಶಾಹುದ ಅಹಮದ್ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಯಿತು.
ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಲಾಟರಿ ಪ್ರಕ್ರಿಯೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರ ವರ್ಷ ರಾಜೀವ ಜಾನೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಸಿಂಧೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶೈಲೇಂದ್ರ ಸಿಂಗ್, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಆಶಿಶ್ ರೆಡ್ಡಿ, ಪಾಲಿಕೆ ಸದಸ್ಯರಾದ ಅಯಾಜ್ ಖಾನ್, ರಿಯಾಜ್ ಅಹಮದ್, ಖುಸ್ರೋ ಜಾಗೀರ್ದಾರ್, ಲಿಯಾಕತ್ ಪಾಟೀಲ್, ಸಾಜಿದ್ ಕಲ್ಯಾಣಿ, ಸಚಿನ್ ಶಿರವಾಳ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






