10 ಸಾವಿರ ರೋಗಿಗಳಿಗೆ ʼಗೋಲ್ಡನ್ ಹವರ್ʼನಲ್ಲಿ ಯಶಸ್ವಿ ಚಿಕಿತ್ಸೆ ನೀಡಿದ ಕಲಬುರಗಿ ಟ್ರಾಮಾ ಸೆಂಟರ್

ಕಲಬುರಗಿ : ಕಲಬುರಗಿಯ ಟ್ರಾಮಾ ಸೆಂಟರ್ ಸೋಮವಾರ ವರ್ಷದ ಸಂಭ್ರಮ ಆಚರಿಸಿಕೊಳ್ಳುತ್ತಿದ್ದು, ಕಳೆದ ಒಂದು ವರ್ಷದಲ್ಲಿ ತೀವ್ರತರಹದ ಅಪಘಾತ, ರಸ್ತೆ ಅಪಘಾತದ ಸುಮಾರು 10 ಸಾವಿರ ರೋಗಿಗಳಿಗೆ ಗೋಲ್ಡನ್ ಹವರ್ನಲ್ಲಿ ಯಶಸ್ವಿ ಚಿಕಿತ್ಸೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
2024ರ ಫೆ.10 ರಂದು ಉದ್ಘಾಟನೆಗೊಂಡ ಈ ಟ್ರಾಮಾ ಸೆಂಟರ್ನಲ್ಲಿ ಇದೂವರೆಗೆ 3,690 ಜನರಲ್ ಸರ್ಜರಿ, 1,496 ಆರ್ಥೋಪೆಡಿಕ್ಸ್ ಸರ್ಜರಿಗೆ ದಾಖಲಾಗಿ ಇದರಲ್ಲಿ 1,018 ಜನ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದರಲ್ಲಿ 235 ತುರ್ತು ಶಸ್ತ್ರಚಿಕಿತ್ಸೆಗಳಾದರೆ 783 ನಿಯಮಿತ ಶಸ್ತ್ರ ಚಿಕಿತ್ಸೆಗಳಾಗಿವೆ.
ಇದಲ್ಲದೆ ರಸ್ತೆ ಅಪಘಾತದ ಪ್ರಕರಣದಲ್ಲಿ 2,927, ಹಲ್ಲೆ ಪ್ರಕರಣದ 3,858, ಇತರೆ 708 ಸೇರಿ ಒಟ್ಟು 7,493 ಮೆಡಿಕೋ ಲೀಗಲ್ ಪ್ರಕರಣದಲ್ಲಿಯೂ ಚಿಕಿತ್ಸೆ ನೀಡಲಾಗಿದೆ. 48 ಪಾಲಿಟ್ರಾಮಾ ರೋಗಿಗಳಿಗೆ ಆರೈಕೆ ಮಾಡಿದಲ್ಲದೆ 17 ದೊಡ್ಡ ತರಹದ ಅಪಘಾತ ಪ್ರಕರಣಗಳಲ್ಲಿ ದಾಖಲಾದ ರೋಗಿಗಳಿಗೆ ತ್ವರಿಗತಿಯಲ್ಲಿ ಸೇವೆ ನೀಡಿ ಅವರ ಜೀವ ಉಳಿಸಿದ ಖ್ಯಾತಿ ಕಲ್ಯಾಣ ಕರ್ನಾಟಕದ ಏಕೈಕ ಸರ್ಕಾರಿ ಸ್ವಾಮ್ಯದ ಈ ಟ್ರಾಮಾ ಸೆಂಟರ್ಗೆ ಸಲ್ಲುತ್ತದೆ. 4,726 ಜನ ಎಂ.ಆರ್.ಐ., 7,081 ಸಿ.ಟಿ.ಸ್ಕ್ಯಾನ್, 3,123 ಅಲ್ಟ್ರಾಸೌಂಡ್ ಕ್ಯಾನಿಂಗ್, 13,626 ಜನ ಎಕ್ಸರೇ ಸೌಲಭ್ಯ ಸಹ ಪಡೆದಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಾಳುಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಸಾಕು ಬಡಜನರು ಲಕ್ಷಾಂತರ ರೂ. ಹಣ ಸುರಿಯಬೇಕಾಗುತ್ತದೆ. ಇನ್ನೂ ರಸ್ತೆ ಅಪಘಾತದ ನಂತರ ಆ ಕುಟುಂಬದ ಆರ್ಥಿಕ ಪರಿಸ್ಥಿತಿ ಹೇಳತೀರದು. ಇಂತಹ ಸಂದರ್ಭದಲ್ಲಿ ಬಡ ಜನರಿಗೆ ಉಚಿತ ಚಿಕಿತ್ಸೆ ದೊರೆತಲ್ಲಿ ಅವರ ಜೀವನ ಬಂಡಿ ಸಾಗಲು ಅನುಕೂಲವಾಗುತ್ತದೆ ಎಂದರಿತು ಜಿಲ್ಲೆಯವರೇ ಆದ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, ವಿಶೇಷ ಮುತುವರ್ಜಿ ವಹಿಸಿ ಕಲಬುರಗಿಯಲ್ಲಿ ಸ್ಥಾಪಿಸಲಾಗಿರುವ ಈ ಟ್ರಾಮಾ ಸೆಂಟರ್ಗೆ ಇದೀಗ ಬೇಡಿಕೆ ಹೆಚ್ಚಾಗಿದೆ.
ಈಗ ಎಲ್ಲಿಯೇ ರಸ್ತೆ ಅಪಘಾತವಾದಲ್ಲಿ ಗಾಯಾಳುಗಳನ್ನು ಟ್ರಾಮಾ ಸೆಂಟರ್ಗೆ ಕರೆತರಲಾಗುತ್ತಿದೆ. ಕೆಲವೊಮ್ಮೆ ಖಾಸಗಿ ಆಸ್ಪತ್ರೆಗೆ ದಾಖಲಾದ ನಂತರ ಹಣಕಾಸಿನ ಸಮಸ್ಯೆ ತಲೆದೋರಿದಾಗ ಪುನ: ಇಲ್ಲಿಗೆ ಬಂದು ಚಿಕಿತ್ಸೆ ಪಡೆದವರು ಇದ್ದಾರೆ. ಟ್ರಾಮಾ ಸೆಂಟರ್ ಆರಂಭದಿಂದಲೂ ಶೇ.100ರಷ್ಟು ಹಾಸಿಗೆ ಭರ್ತಿಯೊಂದಿಗೆ ಗಾಯಾಳು ರೋಗಿಗಳನ್ನು ವಾಸಿ ಮಾಡುವ ಕೆಲಸದಲ್ಲಿ ನಿರತವಾಗಿದೆ.
ಟ್ರಾಮಾ ಸೆಂಟರ್ ನಲ್ಲಿ ಏನೇನಿದೆ? :
100 ಹಾಸಿಗೆಯ ಟ್ರಾಮಾ ಸೆಂಟರ್ ಅತ್ಯಾಧುನಿಕ ಇ.ಎಂ.ಆರ್.ಐ, ಸಿ.ಟಿ. ಸ್ಕ್ಯಾನಿಂಗ್, ಬ್ಲಡ್ ಬ್ಯಾಂಕ್ ಸೌಲಭ್ಯ ಒಳಗೊಂಡಿದೆ. ಮೇಜರ್ ಮತ್ತು ಮೈನರ್ ಓ.ಟಿ. ಥಿಯೇಟರ್ಗಳಿವೆ. 20 ಹಾಸಿಗೆ ಐ.ಸಿ.ಯು, 30 ಹಾಸಿಗೆ ಮಾಸ್ ಕ್ಯಾಜುವಲ್ಟಿಗೆ, 40 ಹಾಸಿಗೆ ಜನರಲ್ ವಾರ್ಡ್ಗೆ ಮೀಸಲಿರಿಸಿದೆ.
ಮಹಿಳೆಯರಿಗೆ ಪ್ರತ್ಯೇಕ ವಾರ್ಡ್ ಸೌಲಭ್ಯ ಇದೆ. ಅತ್ಯಾಧುನಿಕ ಸೌಲಭ್ಯದ ಅಂಬುಲೆನ್ಸ್, ಬ್ಯಾಟರಿ ಚಾಲಿತ ವಾಹನಗಳು ಇಲ್ಲಿವೆ. ನ್ಯೂರೋಲಾಜಿ, ಆರ್ಥೋಪೆಡಿಕ್ಸ್, ಜನರಲ್ ಸರ್ಜರಿ, ಓರಲ್ ಮ್ಯಾಕ್ಸಿಲ್ಲೋ ಫೇಶಿಯಲ್ ಸರ್ಜರಿ, ಅರವಳಿಕೆ ವಿಭಾಗದ ತಜ್ಞ ವೈದ್ಯರಿದ್ದು, 24 ಗಂಟೆ ಇಲ್ಲಿ ಚಿಕಿತ್ಸೆ ಲಭ್ಯವಿದೆ. ಇಲ್ಲಿನ ಕ್ಯಾಜುವಲ್ಟಿ ವೇ ವಿಭಾಗ ದೊಡ್ಡದಾಗಿದ್ದು, ಒಮ್ಮೆಲೆ 50 ರಿಂದ 100 ಜನರಿಗೆ ತುರ್ತು ಪರಿಸ್ಥಿಯಲ್ಲಿ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆಯಾಗಿ ರೋಗಿ ಸ್ನೇಹಿ ಪರಿಣಾಮಕಾರಿ ವಿನ್ಯಾಸದ ಕಟ್ಟಡ ಇದಾಗಿದೆ. ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಮತ್ತು ಎ.ಪಿ.ಎಲ್. ಪಡಿತರದಾರರಿಗೆ ರಿಯಾಯಿತಿ ದರದಲ್ಲಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಫೆ.5 ರಂದು ಬಸವಕಲ್ಯಾಣ ತಾಲೂಕಿನ ಹಂದ್ರಾಳ(ಕೆ) ಗ್ರಾಮದ ಹೊಲದಲ್ಲಿ ತಮ್ಮ ತಾಯಿ ಕಲಾವತಿ ಅವರಿಗೆ ಕಾಡು ಹಂದಿ ಗುದಿದ್ದರಿಂದ ಹೊಟ್ಟೆಯ ಕರುಳಿಗೆ ಹಾನಿಯಾಗಿತ್ತು. ಕೂಡಲೆ ಕಲಬುರಗಿಯ ಟ್ರಾಮಾ ಸೆಂಟರ್ ಗೆ ತಂದು ದಾಖಲಿಸಿದ್ದೇವೆ. ಮರು ದಿನವೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೀಗ ನಮ್ಮ ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ.
-ಮಿಲಿಂದ ಲಕ್ಷ್ಮಣ,ಕಲಾವತಿ ಪುತ್ರ
ರಸ್ತೆ ಅಪಘಾತದಲ್ಲಿ ದಾರಿಯಲ್ಲಿ ಬಿದ್ದಿದ್ದೆ. 108 ಅಂಬುಲೆನ್ಸ್ ನವರು ಇಲ್ಲಿಗೆ ತಂದು ದಾಖಲಿಸಿದ್ದಾರೆ. ಕೂಡಲೆ ವೈದ್ಯರು ನನಗೆ ತಪಾಸಣೆ, ಸ್ಕ್ಯಾನಿಂಗ್ ಮಾಡಿಸಿ ಐ.ಸಿ.ಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಿದ್ದಾರೆ. ವೈದ್ಯರಲ್ಲಿಯೇ ನಾನು ದೇವರನ್ನು ಕಂಡಿರುವೆ.
-ಮಲ್ಲಿಕಾರ್ಜುನ ಚೆನ್ನಪ್ಪ,ಲಕ್ಣ್ಮೀಪುರ,ಸುರಪುರ,(ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು)
ಲೇವಲ್ 1 ಟ್ರಾಮಾ ಸೆಂಟರ್ ಆದರೆ ರೋಗಿಗೆ ಇಲ್ಲಿಯೇ ಚಿಕಿತ್ಸೆ :
ಪ್ರಸ್ತುತ ಸೆಂಟರ್ನಲ್ಲಿ ನ್ಯೂರೋಲಾಜಿ, ಆರ್ಥೋಪೆಡಿಕ್ಸ್, ಜನರಲ್ ಸರ್ಜರಿ, ಓರಲ್ ಮ್ಯಾಕ್ಸಿಲ್ಲೋ ಫೇಶಿಯಲ್ ಸರ್ಜರಿ ವಿಭಾಗಗಳಿವೆ. ಇದರೊಂದಿಗೆ ಪ್ಲಾಸ್ಟಿಕ್ ಸರ್ಜರಿ, ವಸ್ಕುಲರ್ ಸರ್ಜರಿ ವಿಭಾಗ ಇಲ್ಲಿಗೆ ಮಂಜೂರು ಮಾಡಿ ಲೆವಲ್ 1 ಟ್ರಾಮಾ ಸೆಂಟರ್ ಆಗಿ ಉನ್ನತ್ತೀಕರಿಸಿದಲ್ಲಿ ಯಾವುದೇ ತರಹದ ಅಪಘಾತ ಪ್ರಕರಣಗಳಲ್ಲಿ ರೋಗಿಗೆ ಬೇರೆ ಯಾವುದೇ ಆಸ್ಪತ್ರೆಗೆ ಕಳುಹಿಸದೇ ಕಲಬುರಗಿ ಟ್ರಾಮಾ ಸೆಂಟರ್ನಲ್ಲಿಯೇ ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.
-ಡಾ.ಶಿವಕುಮಾರ ಸಿ.ಆರ್.,ವೈದ್ಯಕೀಯ ಅಧೀಕ್ಷಕ,ಜಿಮ್ಸ್ ಆಸ್ಪತ್ರೆ







