ಕಲಬುರಗಿ | ಕಾರಾಗೃಹದ 425 ಜನ ಬಂಧಿಗಳಿಗೆ ಸ್ಕ್ರೀನಿಂಗ್ ಮೂಲಕ ಕ್ಷಯರೋಗ ತಪಾಸಣೆ

ಕಲಬುರಗಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕಾರ್ಯಾಲಯ ಹಾಗೂ ಕೇಂದ್ರ ಕಾರಾಗೃಹದ ಇವುಗಳ ಸಹಯೋಗದೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಬುಧವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಉಚಿತವಾಗಿ ಟಿ.ಬಿ. ಮುಕ್ತ ಭಾರತ 100 ದಿನಗಳ ಕ್ಷಯರೋಗ ಅಭಿಯಾನದಡಿ ಸ್ಕ್ರೀನಿಂಗ್ ಮೂಲಕ ಕ್ಷಯರೋಗ ಪರೀಕ್ಷೆ ಮೂಲಕ ತಪಾಸಣೆ ನಡೆಸಲಾಯಿತು.
ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿ ಡಾ.ಚಂದ್ರಕಾಂತ ನರಬೋಳಿ ಅವರು ಮಾತನಾಡಿ, ಕ್ಷಯ ರೋಗವು ಬ್ಯಾಕ್ಟೀರಿಯಾ ಮೂಲಕ ಹರಡಲಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆ ಇದಾಗಿದೆ. ಪ್ರತಿಯೊಬ್ಬರು ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದರ ಮೂಲಕ ಹಾಗೂ ಇದಕ್ಕೆ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಂಡು ಟಿಬಿ ಮುಕ್ತ ಭಾರತಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ ಅನಿತಾ ಆರ್.ಮಾತನಾಡಿ, ಟಿಬಿ ಮುಕ್ತ ಭಾರತ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಕಾರಾಗೃಹದಲ್ಲಿರುವ ಪ್ರತಿಯೊಬ್ಬ ಬಂಧಿಗಳು ಹಾಗೂ ಸಿಬ್ಬಂದಿ ವರ್ಗದವರು ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದರ ಮೂಲಕ ಟಿ.ಬಿ.ಮುಕ್ತ ಭಾರತ 100 ದಿನಗಳ ಕ್ಷಯ ರೋಗ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಬಂಧಿಗಳ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಪ್ರತಿ ಮಾಹೆ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 425 ಜನ ಬಂದಿಗಳಿಗೆ ಕ್ಷಯರೋಗ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ ಅರ್ಚನಾ, ಡಾ.ಆನಂದ ಅಡಕಿ, ಡಾ.ರವಿಂದ್ರ ಬನ್ನೇರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಾರುತಿರಾವ್, ಫರತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸಂತೋಷ ಪಾಟೀಲ್, ಸಹಾಯಕ ಅಧೀಕ್ಷ ಚನ್ನಪ್ಪ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಜೈಲರ್ಗಳಾದ ಸುನಂದ ವಿ., ಸಾಗರ ಪಾಟೀಲ ಹಾಗೂ ಐ.ಸಿ.ಎಂ.ಆರ್. ತಂಡದವರು ಉಪಸ್ಥಿತರಿದ್ದರು.
ಸಂಸ್ಥೆಯ ಸಹಾಯಕ ಅಧೀಕ್ಷಕ ಸುರೇಶ್ ಬಿ. ಸ್ವಾಗತಿಸಿದರು. ಸುಗಲಾ ರಾಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ನಾಗರಾಜ ಮುಲಗೆ ವಂದಿಸಿದರು. ಸಂಸ್ಥೆಯ ಶಿಕ್ಷಾ ಬಂದಿಯಾದ ವೀರೇಶ್ ಅವರು ಪ್ರಾರ್ಥನಾ ಗೀತೆ ಹಾಡಿದರು.







