Kalaburagi | ನಕಲಿ ಪಿಸ್ತೂಲ್ ತೋರಿಸಿ ಕೊಲೆ ಯತ್ನ ಆರೋಪ : ಇಬ್ಬರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಕಲಬುರಗಿ: ನಗರದ ಬಿದ್ದಾಪುರ ಕಾಲೊನಿಯ ಬೀರಲಿಂಗೇಶ್ವರ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ನಕಲಿ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಗರದ ಎಂಎಸ್ಕೆ ಮಿಲ್ ಪ್ರದೇಶದ ಇಕ್ಬಾಲ್ ಕಾಲೊನಿ ನಿವಾಸಿಗಳಾದ ಸೈಯದ್ ಜಿಲಾನ್ ಅಲಿಯಾಸ್ ರೇತಿ ಬಾಬಾ (36) ಹಾಗೂ ಜಾವೇದ್ ಪಟೇಲ್ (35) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಬೆದರಿಕೆ ಹಾಕಲು ಬಳಸಿದ್ದ ನಕಲಿ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜುಲೈ 22ರಂದು ಮಧ್ಯಾಹ್ನ ಆರೋಪಿಗಳು ಬೀರಲಿಂಗೇಶ್ವರ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಮದ್ಯಪಾನ ಹಾಗೂ ಊಟ ಮಾಡುತ್ತಿದ್ದ ವೇಳೆ ಅಲ್ಲಿಯೇ ಗುಟ್ಕಾ ತಿಂದು ಉಗುಳಿದ್ದರು. ಇದನ್ನು ಬಾರ್ ಮಾಲೀಕರ ಸಹೋದರ ಪ್ರಶ್ನಿಸಿದ್ದರಿಂದ ಮಾತಿನ ಚಕಮಕಿ ನಡೆದು, ಬಳಿಕ ನೂಕಾಟಕ್ಕೆ ತಿರುಗಿದೆ. ಈ ವೇಳೆ ಆರೋಪಿಗಳು ನಕಲಿ ಪಿಸ್ತೂಲ್ ಪ್ರದರ್ಶಿಸಿ ಬೆದರಿಕೆ ಹಾಕಿ ಕೊಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ.
ಘಟನೆ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ಹಾಗೂ ಪೊಲೀಸ್ ನಿರೀಕ್ಷಕ ಸತೀಶ ಕಣಮೇಶ್ವರ ಅವರ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಠಾಣೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.






