Kalaburagi | ಸಿಯುಕೆಯ ಎರಡು ಸ್ಟಾರ್ಟಪ್‌ಗಳು ‘ಮಂಥನ್ ಸ್ಟಾರ್ಟಪ್ ನಿಧಿ–2026’ ಅಂತಿಮ ಸುತ್ತಿಗೆ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ವ್ಯವಹಾರ ನಿರ್ವಹಣಾ ವಿಭಾಗ ಹಾಗೂ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳ ನೇತೃತ್ವದ ಎರಡು ಸ್ಟಾರ್ಟಪ್ ತಂಡಗಳು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಯೋಜಿಸಿರುವ ‘ಮಂಥನ್ ಸ್ಟಾರ್ಟಪ್ ನಿಧಿ–2026’ರ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.
‘ಮಂಥನ್’ ಎಫ್‌ಕೆಸಿಸಿಐನ ಪ್ರಮುಖ ವಾರ್ಷಿಕ ಬಿಸಿನೆಸ್ ಪ್ಲಾನ್ ಪ್ರಸ್ತುತಿ ಸ್ಪರ್ಧೆಯಾಗಿದ್ದು, ವಿದ್ಯಾರ್ಥಿಗಳು, ಯುವ ಉದ್ಯಮಿಗಳು ಹಾಗೂ ಸ್ಟಾರ್ಟಪ್ ಸಂಸ್ಥಾಪಕರಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳ ಉದ್ಯಮ ಕಲ್ಪನೆಗಳನ್ನು ಗುರುತಿಸಿ, ಹೊಸ ಉದ್ಯಮ ಆರಂಭಿಸುವ ಯೋಜನೆಗಳಿಗೆ ಅನುದಾನ ಹಾಗೂ ಕೈಗಾರಿಕಾ ಕ್ಷೇತ್ರದ ಪ್ರೋತ್ಸಾಹ ಒದಗಿಸುವ ಈ ಸ್ಪರ್ಧೆಯನ್ನು 2007ರಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ 18ನೇ ಆವೃತ್ತಿ ನಡೆಯುತ್ತಿದೆ.
ಸಿಯುಕೆಯ ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಸೃಷ್ಟಿ ಪ್ರಿಯಾ ಹಾಗೂ ಅಜರ್ ಇಕ್ಬಾಲ್ ಮತ್ತು ಎಂಬಿಎ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣೆಯ ದ್ವಿತೀಯ ವರ್ಷದ ವಿದ್ಯಾರ್ಥಿ ಮುಕೇಶ್ ಜಿ. ಅವರು ಅಭಿವೃದ್ಧಿಪಡಿಸಿರುವ ‘ನೆಕ್ಸ್ಟ್ ಬಸ್’ ಕೃತಕ ಬುದ್ಧಿಮತ್ತೆ (AI) ಹಾಗೂ ಇಂಟರ್ನೆಟ್ ಆಫ್ ಥಿಂಗ್ಸ್ (IoT) ಆಧಾರಿತ ಸಾರ್ವಜನಿಕ ಸಾರಿಗೆ ಪರಿಹಾರವಾಗಿದೆ.
ಇನ್ನೊಂದು ತಂಡದ ‘ಪೂರ್ಣ ಯಾತ್ರಾ’ ಯೋಜನೆಯು ‘ಒಂದು ಯೋಜನೆ, ಒಂದು ಪಾವತಿ, ಸಂಪೂರ್ಣ ಪ್ರವಾಸ’ ಎಂಬ ಪರಿಕಲ್ಪನೆಯೊಂದಿಗೆ ರೂಪುಗೊಂಡಿರುವ ಸಮಗ್ರ ಪ್ರಯಾಣ ವೇದಿಕೆಯಾಗಿದೆ. ಪ್ರವಾಸಿ ಸ್ಥಳಗಳ ಹುಡುಕಾಟ, ಪ್ರವಾಸ ಯೋಜನೆ, ಸಾರಿಗೆ ಬುಕ್ಕಿಂಗ್, ಹೋಟೆಲ್ ಕಾಯ್ದಿರಿಸುವಿಕೆ, ಪ್ರವೇಶ ಟಿಕೆಟ್ ಹಾಗೂ ಊಟದ ವ್ಯವಸ್ಥೆ ಸೇರಿದಂತೆ ಪ್ರವಾಸಕ್ಕೆ ಅಗತ್ಯವಿರುವ ಹಲವು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒಂದೇ ಬಾರಿ ಪಾವತಿ ಮಾಡುವ ಸೌಲಭ್ಯದೊಂದಿಗೆ ಒದಗಿಸುವುದು ಇದರ ಉದ್ದೇಶವಾಗಿದೆ.
ಬೆಂಗಳೂರು, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಪ್ರಮುಖ ನಗರಗಳಿಗೆ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ‘ಪೂರ್ಣ ಯಾತ್ರಾ’ ತಂಡ ಹೊಂದಿದೆ. ಸುಗಮ ಹಾಗೂ ಕೈಗೆಟುಕುವ ಪ್ರಯಾಣದ ಅನುಭವ ಒದಗಿಸುವ ಗುರಿಯೊಂದಿಗೆ 20 ಲಕ್ಷ ಬಳಕೆದಾರರು, ಒಂದು ಲಕ್ಷ ಬುಕ್ಕಿಂಗ್‌ಗಳು ಹಾಗೂ ವಾರ್ಷಿಕ 4.50 ಕೋಟಿ ರೂ. ಆದಾಯ ಸಾಧಿಸುವ ಗುರಿಯನ್ನು ತಂಡ ಹೊಂದಿದೆ.
‘ಪೂರ್ಣ ಯಾತ್ರಾ’ ಸ್ಟಾರ್ಟಪ್‌ನ್ನು ಎಂಬಿಎ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣೆ ವಿದ್ಯಾರ್ಥಿ ಉಂಕೂರು ಲಕ್ಷ್ಮಣ ರಾವ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಿನ್ಸ್ ಕುಮಾರ್, ಇತಿಹಾಸ ಮತ್ತು ಪುರಾತತ್ವ ವಿಭಾಗದ ಉನ್ನವ ಯೋಗೇಶ್ವರ ರಾವ್ ಹಾಗೂ ವ್ಯವಹಾರ ಅಧ್ಯಯನ ವಿಭಾಗದ ಮುಂಡ್ಯ ವಿಠಲ್ ಅವರು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಅವರೊಂದಿಗೆ ಸಂವಾದ ನಡೆಸುವ ಅವಕಾಶವೂ ವಿದ್ಯಾರ್ಥಿಗಳಿಗೆ ದೊರೆಯಿತು. ಸ್ಪರ್ಧೆಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ತಂಡಗಳಿಗೆ 25 ಲಕ್ಷ ರೂ. ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗುತ್ತದೆ.
ವಿದ್ಯಾರ್ಥಿಗಳ ಸಾಧನೆಗೆ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿನಂದನೆ ಸಲ್ಲಿಸಿದ್ದಾರೆ. ಇದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ–2020ರ ಆಶಯದಂತೆ ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನದ ಜೊತೆಗೆ ಕೌಶಲ ಹಾಗೂ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಅವರು ತಿಳಿಸಿದ್ದಾರೆ.






