ಕಲಬುರಗಿ | ಕೊಲೆ ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕಲಬುರಗಿ: ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗರಗಾ ರೋಡ್ ಮತ್ತು ಮಾಲಗತ್ತಿ ಕ್ರಾಸಿನ ಹತ್ತಿರ ನಡೆದ ವ್ಯಕ್ತಿಯೊರ್ವರ ಕೊಲೆ ಪ್ರಕರಣಕ್ಕೆ ಸಂಬoಧಿಸಿದಂತೆ ಇಬ್ಬರು ಕೊಲೆ ಮಾಡಿರುವುದು ರುಜುವಾತುಪಟ್ಟಿರುವ ಹಿನ್ನೆಲೆಯಲ್ಲಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಇಲ್ಲಿನ ಅಬುಬಕರ್ ಕಾಲೋನಿ ಮೈಮೂದಾ ಮಜೀದ ನಿವಾಸಿ ಖಾಜಾ ಮೈನುದ್ದಿನ್ ಬಾಬಾ ಹಾಗೂ ಅಜಾದಪುರದ ನಿವಾಸಿ ಇಸಾಕ್ ಶಾಬೋದ್ದಿನ್ ಶಿಕ್ಷೆಗೆ ಒಳಗಾದ ಅಪರಾಧಿಗಳು. ಇವರು ಮುಹಮ್ಮದ್ ಅಝರೋದ್ದಿನ್ ಎಂಬಾತನನ್ನು ಕೊಲೆ ಮಾಡಿದ್ದರು.
ಬಿಲ್ಡಿಂಗ್ ಮಟಿರೀಯಲ್ ಸಪ್ಲೆ ಕೆಲಸ ಹಾಗೂ ಮರಳಿನ ಬೋಕರ ಕೆಲಸ ಮತ್ತು ಹಣ ಕೊಡುವ ಮತ್ತು ತೆಗೆದುಕೊಳ್ಳುವ ವಿಷಯದಲ್ಲಿ ಮುಹಮ್ಮದ್ ಅಝರೋದ್ದಿನ್ ವರ್ಚಸ್ಸು ಹೆಚ್ಚಾಗುತ್ತಿದ್ದರಿಂದ ಆರೋಪಿತರು ಸಹಿಸಿಕೊಳ್ಳದೆ ಕೊಲೆ ಮಾಡುವ ಉದ್ದೇಶದಿಂದ 2015 ರ ಜನವರಿ 5ರಂದು ಮುಹಮ್ಮದ್ ಅಝರೋದ್ದಿನ್ ರನ್ನು ಮೀನು ಹಿಡಿಯುವ ನೆಪ ಮಾಡಿ ಬೈಕ್ ಮಧ್ಯದಲ್ಲಿ ಒತ್ತಾಯದಿಂದ ಕೂರಿಸಿಕೊಂಡು ವೆಂಕಟಬೇನೂರ ಗ್ರಾಮ ಸೀಮಾಂತರದ ಕೆರೆಯ ದಂಡೆಯಲ್ಲಿ ಕರೆದುಕೊಂಡು ಹೋಗಿ ಮೀನು ಹಿಡಿಯಲು ಮುಹಮ್ಮದ್ ಅಝರೋದ್ದಿನ್ ದಂಡೆಯಲ್ಲಿ ಕುಳಿತಾಗ ಖಾಜಾ ಮೈನುದ್ದಿನ್ ಬಾಬಾ ಹತೋಡಿಯಿಂದ ಆತನ ತಲೆಯ ಹಿಂಭಾಗದಲ್ಲಿ ಮೂರು ಬಾರಿ ಜೋರಾಗಿ ಹೊಡೆದಿದ್ದರಿಂದ ಮುಹಮ್ಮದ್ ಅಝರೋದ್ದಿನ್ ಸ್ಥಳದಲ್ಲಿಯೆ ಮೃತಪಟ್ಟಿದ್ದರು.
ನಂತರ ಇಬ್ಬರು ಆರೋಪಿಗಳು ಆತನ ಕೈ-ಕಾಲುಗಳನ್ನು ಹಿಡಿದು ಕರೆಯ ನೀರಿನಲ್ಲಿ ಹಾಕಿ ಸಾಕ್ಷಿ ಸಿಗದಂತೆ ಮಾಡಿದ್ದರು. ಮೃತ ಮುಹಮ್ಮದ್ ಅಝರೋದ್ದಿನ್‌ಗೆ ಬೈಕ್ ಮೇಲೆ ಕರೆದುಕೊಂಡು ಹೋಗುವುದನ್ನು ಅಬ್ದುಲ್ ರಶೀದ್ ಮತ್ತು ಮುಹಮ್ಮದ್ ಖಲೀಲ್ ಎಂಬವರು ನೋಡಿದ್ದರು. ಈ ಕುರಿತು ಗ್ರಾಮೀಣ ಠಾಣೆಯ ಚಂದ್ರಶೇಖರ ತಿಗಡಿ ಹಾಗೂ ಎ.ವಾಜೀದ ಪಟೇಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಾಮಾರ್ಷಿಸಿ ಎರಡು ಪಕ್ಷದವರ ವಾದ ವಿವಾದ ಆಲಿಸಿ ಕೊಲೆ ಮಾಡಿರುವುದು ರುಜುವಾತುಪಟ್ಟಿರುವುದರಿಂದ ಇಬ್ಬರು ಆರೋಪಿಗಳಿಗೆ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರಾಜಮಹೇಂದ್ರ ಜಿ.ಕಿರಣಗಿ ಹಾಗೂ ಎಸ್. ಆರ್ ನರಸಿಂಹಲು ವಾದ ಮಂಡಿಸಿದರು.







