ಕಲಬುರಗಿ | ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ಕಲಬುರಗಿ: ಸಾಲಬಾಧೆ ತಾಳಲಾರದೆ ರೈತನೊರ್ವ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ತಾಲೂಕಿನ ಪಾಳಾ ಗ್ರಾಮದಲ್ಲಿ ನಡೆದಿದೆ.
ನಾಗೇಂದ್ರ ನಾಯಿಕೊಡಿ (45) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದುಬಂದಿದೆ.
ಪಾಳಾ ಗ್ರಾಮದಲ್ಲಿ 20 ಎಕರೆ ಭೂಮಿ ಕಡತ ಹಾಕಿಕೊಂಡು ಬೇಸಾಯ ಮಾಡುತ್ತಿದ್ದರು. ಯುನಿಯನ್ ಬ್ಯಾಂಕ್‌ನಿoದ ಮತ್ತು ಜಮೀನು ಮಾಲಕರಿಂದ ಮತ್ತು ಇತರರಿಂದ ಸೇರಿ ಒಟ್ಟು 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ವರ್ಷ ಅತಿಯಾದ ಮಳೆಯಿಂದ ಕಡಿತ ಹಾಕಿಕೊಂಡ ಜಮೀನು ಮತ್ತು ಸ್ವಂತ ಜಮೀನಿನಲ್ಲಿ ಬಿತ್ತಿದ ಬೆಳೆ ಹಾನಿಯಾಗಿತ್ತು. ಇದರಿಂದ ನೊಂದಿರುವ ರೈತ ನಾಗೇಂದ್ರ ಮನೆಯಲ್ಲಿ ಯಾರು ಇಲ್ಲದ ವೇಳೆ ಗುರುವಾರ 9 ಗಂಟೆ ಸುಮಾರಿಗೆ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿ ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡುತ್ತಿದ್ದ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮೃತ ರೈತನ ಪತ್ನಿ ಗೌರಮ್ಮ ನಾಯಿಕೊಡಿ ಅವರು ದೂರು ನೀಡಿದ ಮೇರೆಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.





