ಕಲಬುರಗಿ | ಲವ್ ಜಿಹಾದ್ ಕುರಿತು ಸ್ಥಳೀಯ ಪತ್ರಿಕೆಯಿಂದ ಆಧಾರರಹಿತ ವರದಿ : ಕರೆಸಿ ವಿಚಾರಣೆ ನಡೆಸುತ್ತೇವೆ ; ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ

ಕಲಬುರಗಿ: 'ಕಲಬುರಗಿ ನಗರದಲ್ಲಿ ಒಂದೇ ವರ್ಷದಲ್ಲಿ 24 ಯುವತಿಯರು ಇಸ್ಲಾಂ ಲವ್ ಜಿಹಾದ್‌ಗೆ ಬಲಿ' ಎಂಬ ಶೀರ್ಷಿಕೆ ನೀಡಿ ವರದಿ ಪ್ರಕಟಿಸಿರುವ ಸಂಜೆ ಪತ್ರಿಕೆ ʼಕರ್ನಾಟಕ ಸಂಧ್ಯಾಕಾಲʼದ ಸಂಪಾದಕರನ್ನು ಕರೆಸಿ ಈ ಅಂಕಿ ಅಂಶ ಎಲ್ಲಿಂದ ಪಡೆಯಲಾಗಿದೆ ಎಂದು ವಿಚಾರಣೆ ನಡೆಸುತ್ತೇವೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಹೇಳಿದ್ದಾರೆ.
ಕಲಬುರಗಿ ನಗರದಲ್ಲಿ ಆರೆಸ್ಸೆಸ್ ಪಥ ಸಂಚಲನ ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸಂಧ್ಯಾಕಾಲ ಎಂಬ ಕನ್ನಡ ಪ್ರಾದೇಶಿಕ ದಿನಪತ್ರಿಕೆ ರವಿವಾರ(ಅಕ್ಟೋಬರ್ 12) ಮುಖಪುಟದಲ್ಲಿ ವಿವಾದಿತ ತಲೆ ಬರಹ ನೀಡಿರುವ ವರದಿ ವೈರಲ್ ಆಗುತ್ತಿದೆ.
ʼಕರ್ನಾಟಕ ಸಂಧ್ಯಾಕಾಲʼ ಪತ್ರಿಕೆಯ ವರದಿಯಲ್ಲೇನಿತ್ತು?
"ತಾಂತ್ರಿಕ, ವೈದ್ಯಕೀಯ, ಮತ್ತು ಪದವಿ ಓದುತ್ತಿರುವ ಯುವತಿಯರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುವ ಮುಸ್ಲಿಂ ಯುವಕರು ನಗರದಲ್ಲಿನ ವಿವಿಧ ಶಾಲಾ ಕಾಲೇಜುಗಳ ಸುತ್ತಮುತ್ತ ತಿರುಗುತ್ತಾ, ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ಪ್ರೇಮ ಭೀಕ್ಷೆ ಬೇಡಿ ತಮ್ಮ ಬಲೆಗೆ ಬೀಳುವಂತೆ ಮಾಡಿ ನಂತರ ಅವರನ್ನು ಅಪಹರಿಸಿ ಮದುವೆಯಾಗುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ" ಎಂದು ವರದಿ ಉಲ್ಲೇಖಿಸಿದೆ.
"ಮದುವೆಯ ನಂತರ ಆ ಯುವತಿಯವರು ಸಿಂಧೂರ ಕುಂಕುಮ ಅಳಿಸಿ ಹಾಕಿ, ಹಿಂದೂ ಧರ್ಮದಲ್ಲಿ ಪೂಜಿಸುವ ದೇವರುಗಳನ್ನು ಪೂಜಾ ವಿಧಿ-ವಿಧಾನಗಳನ್ನು ಕಡ್ಡಾಯವಾಗಿ ನಿಷೇಧಿಸಿ, ಅವರ ಕೈಗೆ ಕುರ್‌ಆನ್ ನೀಡಿ, ಕುರ್‌ಆನ್ ಪಠಣ ಮಾಡುವಂತೆ ಒತ್ತಾಯ ಮಾಡುತ್ತಾರೆಂದು ಕೆಲವು ಮತಾಂತರವಾದ ಯುವತಿಯರು ಹೇಳಿಕೊಳ್ಳುತ್ತಾರೆ. ಮತಾಂತರವಾದ ಹಿಂದೂ ಸಸ್ಯಹಾರಿ ಯುವತಿಯರಿಗೆ ಕಡ್ಡಾಯವಾಗಿ ಮಾಂಸಹಾರ ತಯಾರಿಸುವುದು ಮತ್ತು ಸೇವನೆ ಮಾಡಲು ಪ್ರೇರೆಪಿಸುತ್ತಾರೆಂದು ಹೇಳಲಾಗುತ್ತಿದೆ, ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವ ಪೂರ್ವದಲ್ಲಿ ಗೋ ಪೂಜೆ ಮಾಡುತ್ತಿದ್ದ ಯುವತಿಯರು ಸೆಕ್ಸ್-ದೋಖಾಕ್ಕೆ ಬಲಿಯಾದ ನಂತರ ಗೋವಿನ ಮೌಂಸದ ಅಡುಗೆ ಮಾಡುವ ಪರಿಸ್ಥಿತಿ ಸೃಷ್ಟಿಸಿ ಸಂಪೂರ್ಣ ಮೌಂಸಹಾರಿಗಳನ್ನಾಗಿ ಯುವತಿಯರನ್ನು ಪರಿವರ್ತಿಸಲಾಗುತ್ತಿದೆ. ಕಲಬುರಗಿಯಲ್ಲಿ ಕೆಲವೇ ಕೆಲವು ದಶಕಗಳಲ್ಲಿ ಇಸ್ಲಾಮೀಕರಣ ಮಾಡುವ ಹುನ್ನಾರ ಹೊಂದಿದ್ದಾರೆಂದು ಕೆಲವು ಪಂಡಿತರು ವಿಶ್ಲೇಷಿಸುತ್ತಿದ್ದಾರೆ" ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.
ಈ ಕುರಿತು ವಾರ್ತಾಭಾರತಿಗೆ ಪ್ರತಿಕ್ರಿಯಿಸಿದ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಪತ್ರಿಕೆಯಲ್ಲಿ ಪ್ರಕಟವಾದ ಅಂಕಿ ಅಂಶ ನಾವು ನೀಡಿಲ್ಲ. ಎಲ್ಲಿಂದ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಅವರನ್ನು ಕರೆಸಿ ವಿಚಾರಣೆ ಮಾಡುತ್ತೇವೆ. ಅಂಕಿ ಅಂಶ ಬೇಕೆಂದರೆ ಅಧಿಕೃತವಾಗಿ ಮನವಿ ಕೊಟ್ಟರೆ ಪರಿಶೀಲಿಸಿ ಮಾಹಿತಿ ಕೊಡುತ್ತೇವೆ ಎಂದು ಹೇಳಿದ್ದಾರೆ.







