ಕಲಬುರಗಿ | ಅಕಾಲಿಕ ಮರಣ: ಎಸ್‌ಬಿಐ ಬ್ಯಾಂಕ್ ನಿಂದ 2 ಲಕ್ಷ ರೂ. ವಿಮಾ ಚೆಕ್ ವಿತರಣೆ

ಕಲಬುರಗಿ : ಅಕಾಲಿಕವಾಗಿ ಈಚೆಗೆ ನಿಧನರಾದ ಜೇವರ್ಗಿ ತಾಲ್ಲೂಕಿನ ನೀರ್ಲಕೋಡ್ ಗ್ರಾಮದ ಭೀಮಣ್ಣ ಅವರ ಪತ್ನಿ ಶಾಂಭವಿ ಅವರಿಗೆ ಜೇವರ್ಗಿ ತಹಶೀಲ್ದಾರ ಮಲ್ಲಣ್ಣ ಯಲ್ಗೋಡ್ ಮತ್ತು ಸ್ಥಳೀಯ ಎಸ್.ಬಿ.ಐ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಅಂಬರೀಶ ತೆಗನೂರ ಅವರು ಬುಧವಾರ ಪಿಎಂಎಸ್‌ಬಿವೈ ವಿಮೆಯ 2 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿದರು.
ಈ ವೇಳೆ ವ್ಯವಸ್ಥಾಪಕ ಅಂಬರೀಶ ತೆಗನೂರ ಮಾತನಾಡಿ, 'ಗ್ರಾಹಕರು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿ ವಾರ್ಷಿಕ 436 ರೂ. ವಿಮೆ ಮೊತ್ತ ಪಾವತಿಸಿದರೆ, ಅಕಾಲಿಕ ನಿಧನರಾದರೆ ಮೃತರ ವಾರಸುದಾರರಿಗೆ 2 ಲಕ್ಷ ರೂ. ಮೊತ್ತದ ವಿಮಾ ಪರಿಹಾರ ದೊರೆಯಲಿದೆ.
ಅಲ್ಲದೆ ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ವಾರ್ಷಿಕ 20 ರೂ. ಪಾವತಿಸಿದರೆ, ಗ್ರಾಹಕರಿಗೆ 2 ಲಕ್ಷ ರೂ. ಮೊತ್ತದ ಅಪಘಾತ ವಿಮೆ ದೊರೆಯಲಿದೆ ಎಂದರು.
ಎರಡೂ ಮಹತ್ವದ ವಿಮಾ ಯೋಜನೆಗಳು ಕಡಿಮೆ ಪ್ರಿಮಿಯಂ ಮೊತ್ತದ್ದಾಗಿದ್ದು, ಗ್ರಾಹಕರು ಎರಡೂ ವಿಮಾ ಯೋಜನೆಗಳ ಬಗ್ಗೆ ಶಾಖೆಯ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ವಿಮೆ ಮಾಡಿಸಿಕೊಳ್ಳಬಹುದಾಗಿದೆ ಎಂದರು.