Kalaburagi | ಭೀಮೋತ್ಸವದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಆಶಯಗಳ ಅನಾವರಣ

ಕಲಬುರಗಿ, ಆ.1: ತಾಲೂಕಿನ ಇಟಗಾ (ಅ) ಸಮುದಾಯ ಭವನದಲ್ಲಿ ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಭೀಮೋತ್ಸವ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬುದ್ಧ ಪ್ರಚಾರಕರಾದ ಅಣ್ಣಪ್ಪ ಸಿಂಧೆ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿದ್ದು, ಬುದ್ಧ, ಬಸವಣ್ಣ ಹಾಗೂ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘ ನಿರಂತರವಾಗಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾತೋಶ್ರೀ ರಾಮತಾಯಿ ನಾಟಕ ಅಭಿಯಾನದಡಿ ಸಂಘ ಈಗಾಗಲೇ ಸುಮಾರು 83 ನಾಟಕ ಪ್ರದರ್ಶನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಶೀಘ್ರದಲ್ಲೇ 100ನೇ ಪ್ರದರ್ಶನದ ಐತಿಹಾಸಿಕ ಮೈಲಿಗಲ್ಲು ತಲುಪಲಿ ಎಂದು ಶುಭ ಹಾರೈಸಿದರು.
ಸಂಘದ ಅಧ್ಯಕ್ಷೆ ರೇಖಾ ದೊಡ್ಮನಿ ಮಾತನಾಡಿ, ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಾಂಸ್ಕೃತಿಕ ಸಂಘಟನೆಗಳಿಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಸಹಕಾರದಿಂದ ಗ್ರಾಮೀಣ ಭಾಗದಲ್ಲಿಯೂ ಉತ್ತಮ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲು ಸಾಧ್ಯವಾಗುತ್ತಿದೆ. ಇದೇ ಉತ್ಸಾಹದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಭವ್ಯ, ಅರ್ಥಪೂರ್ಣ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಭೀಮೋತ್ಸವದ ಅಂಗವಾಗಿ ಕೋಲಾಟ, ಸುಗ್ಗಿ ಕುಣಿತ, ಕಂಸಾಳೆ, ‘ಮಾತೋಶ್ರೀ ರಾಮತಾಯಿ–ಅಂಬೇಡ್ಕರ್’ ನಾಟಕ, ಬಸವಣ್ಣನವರ ಜೀವನಾಧಾರಿತ ನಾಟಕ ಸೇರಿದಂತೆ ಜನಪದ ಹಾಗೂ ಸಾಮಾಜಿಕ ಸಂದೇಶ ಸಾರುವ ವಿವಿಧ ಕಲಾ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದು ಭಾರಿ ಮೆಚ್ಚುಗೆ ಗಳಿಸಿದವು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು, ಎಸ್‌ಡಿಎಂಸಿ ಅಧ್ಯಕ್ಷರು, ದಲಿತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಲಾವಿದರು ಹಾಗೂ ಗ್ರಾಮಸ್ಥರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.






