Kalaburagi | ಬರಗಾಲದಲ್ಲಿ ಅರಿಶಿಣ ಬೆಳೆ ನಿರ್ವಹಣೆಗೆ ಎರೆಜಲ, ಜೀವಾಮೃತ ಬಳಸಿ: ಕೆವಿಕೆ ಸಲಹೆ

ಕಲಬುರಗಿ: ಜೂನ್ ಹಾಗೂ ಜುಲೈ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು, ವಿಶೇಷವಾಗಿ ಚಿಂಚೋಳಿ ಭಾಗದ ಅರಿಶಿಣ ಬೆಳೆ ನಿರ್ವಹಣೆಗೆ ರೈತರು ಎರೆಜಲ ಹಾಗೂ ಜೀವಾಮೃತದಂತಹ ಸಾವಯವ ಪೋಷಕಾಂಶಗಳನ್ನು ಬಳಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಚಿಂಚೋಳಿ ತಾಲೂಕಿನ ಚಿಮ್ಮನಚೋಡ್, ಹಸಿರುಗುಂಡಗಿ ಹಾಗೂ ಗರಂಪಳ್ಳಿ ಗ್ರಾಮಗಳ ಅರಿಶಿಣ ಬೆಳೆ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜಹೀರ್ ಅಹಮದ್, ಈ ವರ್ಷ ಮಳೆಯ ಕೊರತೆಯಿಂದ ಅರಿಶಿಣ ಬೆಳೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಚಿಂಚೋಳಿ ಭಾಗದಲ್ಲಿ ಸಾಂಪ್ರದಾಯಿಕವಾಗಿ ಸೇಲಂ–ಚಿಂಚೋಳಿ ಹಾಗೂ ಬೀದರ್ ಸ್ಥಳೀಯ ತಳಿಯ ಅರಿಶಿಣವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಬೆಳೆ ಉತ್ತಮ ಬೆಳವಣಿಗೆಗಾಗಿ ರೈತರು ಎರೆಜಲ ಅಥವಾ ಜೀವಾಮೃತವನ್ನು ಪ್ರತಿ ಲೀಟರ್ ನೀರಿಗೆ 5 ಮಿಲಿ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಮೋಡ ಕವಿದ ವಾತಾವರಣ ಇದ್ದರೂ ಬೀಸುತ್ತಿರುವ ಗಾಳಿಯಿಂದ ಮಳೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ಬೆಳೆಗಳಲ್ಲಿ ಎಲೆ ತಿನ್ನುವ ಹುಳದ ಬಾಧೆ ಕಾಣಿಸಿಕೊಳ್ಳುತ್ತಿದ್ದು, ಆರಂಭಿಕ ಹಂತದಲ್ಲೇ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಕೀಟ ನಿಯಂತ್ರಣ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ವಿಜ್ಞಾನಿ ಡಾ. ಯೂಸುಫ್ ಅಲಿ ನಿಂಬರ್ಗಿ ಮಾತನಾಡಿ, ಜಿಲ್ಲೆಯಲ್ಲಿ ಕಬ್ಬು ಬೆಳೆ ವಿಸ್ತೀರ್ಣ ಹೆಚ್ಚುತ್ತಿದ್ದು, ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಕಳೆ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದರು. ದೀರ್ಘಾವಧಿಯ ಬೆಳೆಗಳಾದ ಅರಿಶಿಣ ಹಾಗೂ ಕಬ್ಬಿನಲ್ಲಿ ಬೋದು ಏರಿಸುವಿಕೆ, ಪ್ರಮುಖ ಬೆಳವಣಿಗೆಯ ಹಂತಗಳಲ್ಲಿ ನೀರಾವರಿ ನಿರ್ವಹಣೆ ಸೇರಿದಂತೆ ವಿವಿಧ ತಾಂತ್ರಿಕ ವಿಷಯಗಳ ಕುರಿತು ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಧೋಳ ಹಾಗೂ ಮಹಾಲಿಂಗಾಪುರ ಭಾಗಗಳಲ್ಲಿ ಜನಪ್ರಿಯವಾಗಿರುವ ‘ಚಿನ್ನ ಸೇಲಂ’ ಅರಿಶಿಣ ತಳಿಯನ್ನು ಈ ವರ್ಷ ಹಸಿರುಗುಂಡಗಿ ಗ್ರಾಮದ ಇಬ್ಬರು ರೈತರು ಪ್ರಾಯೋಗಿಕವಾಗಿ ಬೆಳೆಸಿದ್ದು, ಜುಲೈ ತಿಂಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಅರಿಶಿಣ, ಕಬ್ಬು ಹಾಗೂ ದ್ವಿದಳ ಧಾನ್ಯಗಳ ಬೆಳೆಗಳನ್ನು ರೈತರು ನಿರ್ವಹಿಸುತ್ತಿದ್ದಾರೆ ಎಂದು ವಿಜ್ಞಾನಿಗಳು ಹೇಳಿದರು.
ಈ ಸಂದರ್ಭದಲ್ಲಿ ರೈತರಾದ ರಾಜಶೇಖರ್ ನಿಪ್ಪಾಣಿ, ನಾಗಭೂಷಣ ಕೋರೆ, ಶ್ರೀಕಾಂತ್ ರೆಡ್ಡಿ, ಚನ್ನಬಸಪ್ಪ, ವೀರೇಶ್, ಗುಂಡಪ್ಪ ಹಾಗೂ ನಾಗಬಸಪ್ಪ ಉಪಸ್ಥಿತರಿದ್ದರು.






