Kalaburagi | ವಚನ–ದಾಸ ಸಾಹಿತ್ಯ ಮಾನವೀಯ ಮೌಲ್ಯಗಳ ಪ್ರತೀಕ: ಡಾ. ಸುರೇಶ ಜಾಧವ್

ಕಲಬುರಗಿ: ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ನಾಡು-ನುಡಿಗೆ ಅಪಾರ ಕೊಡುಗೆ ನೀಡಿರುವ ಅಮೂಲ್ಯ ಸಾಹಿತ್ಯ ಪ್ರಕಾರಗಳಾಗಿದ್ದು, ಅವು ಮಾನವೀಯ ಮೌಲ್ಯಗಳನ್ನು ಬೆಳೆಸಿ ವಿಶ್ವಮಾನವರಾಗಲು ಪ್ರೇರಣೆ ನೀಡುತ್ತವೆ ಎಂದು ಹಿರಿಯ ಸಾಹಿತಿ ಡಾ. ಸುರೇಶ ಜಾಧವ್ ಅಭಿಪ್ರಾಯಪಟ್ಟರು.
ನಗರದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ “ದಾಸ ಸಾಹಿತ್ಯ: ದೃಷ್ಟಿ–ಸೃಷ್ಟಿ” ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಚನ ಮತ್ತು ದಾಸ ಸಾಹಿತ್ಯ ಕನ್ನಡಮ್ಮನ ಎರಡು ಕಣ್ಣುಗಳಿದ್ದಂತೆ ಎಂದು ಬಣ್ಣಿಸಿದರು.
ದಾಸ ಸಾಹಿತ್ಯವು ಜಾತಿ ಆಧಾರಿತವಾಗಿರದೆ ಜನಮೂಲದಿಂದ ರೂಪುಗೊಂಡಿದೆ. ದಾಸರ ಕೀರ್ತನೆಗಳು ಸಮಾಜದ ಎಲ್ಲ ವರ್ಗದ ಜನರನ್ನು ತಲುಪಿದ್ದು, ವಿಶೇಷವಾಗಿ ಜೀವನದ ವಿವಿಧ ಸಂಕಷ್ಟಗಳನ್ನು ಎದುರಿಸಿದ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಮೂಡಿಸಿವೆ. ದಾಸರ ಹಾಡುಗಳಿಂದ ಪ್ರೇರಿತರಾಗಿ ಅನೇಕ ಮಹಿಳೆಯರು ಕೀರ್ತನಕಾರರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
“ದಾಸ ಸಾಹಿತ್ಯ: ದೃಷ್ಟಿ–ಸೃಷ್ಟಿ” ಕೃತಿಯ ಲೇಖಕ ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿ, ದಾಸ ಸಾಹಿತ್ಯವು ಸಮಾಜದಲ್ಲಿ ಸಮಾನತೆ ಮತ್ತು ಪರಿವರ್ತನೆ ಮೂಡಿಸುವ ಉದ್ದೇಶದಿಂದ ರೂಪುಗೊಂಡ ಸಾಹಿತ್ಯವಾಗಿದೆ. ಇದು ಜಾತಿ-ಧರ್ಮದ ಮಿತಿಗಳನ್ನು ಮೀರಿ ತ್ಯಾಗ, ಭಕ್ತಿ ಮತ್ತು ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ನಿಂತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅವರು ವಿಜಯದಾಸರ “ಅಂತರಂಗದ ಕದವು ತೆರೆಯಿತಿಂದು, ಎಂತು ಪುಣ್ಯದ ಪ್ರಾಪ್ತಿ ದೊರಕಿತು ಎನಗೆ” ಎಂಬ ಕೀರ್ತನೆಯನ್ನು ಹಾಡಿ ದಾಸ ಸಾಹಿತ್ಯದ ಆಧ್ಯಾತ್ಮಿಕ ಹಾಗೂ ತಾತ್ವಿಕ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ವಹಿಸಿದ್ದರು. ಡಾ. ಶ್ರೀಶೈಲ ನಾಗರಾಳ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಡಾ. ಗವಿಸಿದ್ಧಪ್ಪ ಪಾಟೀಲ್, ಸಿದ್ಧರಾಮ ಸರಸಂಬಿ, ನಾರಾಯಣ ಕುಲಕರ್ಣಿ, ರಾಜೇಂದ್ರ ಝಳಕಿ, ಡಾ. ರಾಜಕುಮಾರ ಮಾಳಗೆ, ಡಾ. ಸಿದ್ಧಪ್ಪ ಹೊಸಮನಿ, ಎಸ್.ಎಸ್. ಹೂಗಾರ, ರೇವಣಸಿದ್ಧಪ್ಪ ದುಕಾನ, ಪ್ರೊ. ಎಸ್.ಎಲ್. ಪಾಟೀಲ್ ಹಾಗೂ ಚಿಂತಕ ಶರಣಗೌಡ ಪಾಳಾ ಸೇರಿದಂತೆ ಹಲವಾರು ಸಾಹಿತಿಗಳು, ಲೇಖಕರು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಡಾ. ವಿಜಯಕುಮಾರ ಪರುತೆ ಕಾರ್ಯಕ್ರಮ ನಿರೂಪಿಸಿದರು.






