ಕಲಬುರಗಿ | “ಕಲಾ ಪ್ರತಿಭೋತ್ಸವ”ಕ್ಕೆ ವಿವಿಧ ಸ್ಪರ್ಧೆಗಳ ಆಯೋಜನೆ: ಅರ್ಜಿ ಆಹ್ವಾನ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಕ್ಕಳು ಮತ್ತು ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ-2025-26 ಕಾರ್ಯಕ್ರಮ (ಬಾಲಪ್ರತಿಭೆ, ಕಿಶೋರಪ್ರತಿಭೆ ಹಾಗೂ ಯುವಪ್ರತಿಭೆ ಸ್ಪರ್ಧೆ) ವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರ:
ಬಾಲಪ್ರತಿಭೆ/ ಕಿಶೋರ ಪ್ರತಿಭೆ: ಏಕ ವ್ಯಕ್ತಿ ಸ್ಪರ್ಧೆಯ ಕಲಾ ಪ್ರಕಾರಗಳ ವಿವರ ಇಂತಿದೆ: ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಕರ್ನಾಟಕ/ಹಿಂದೂಸ್ತಾನಿ ವಾದ್ಯ ಸಂಗೀತ ಹಾಗೂ ಕರ್ನಾಟಕ/ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಯುವ ಪ್ರತಿಭೆ ಸ್ಪರ್ಧೆಯ ಏಕವ್ಯಕ್ತಿಯ ಕಲಾ ಪ್ರಕಾರಗಳ ವಿವರ ಇಂತಿದೆ: ನನ್ನ ಮೆಚ್ಚಿನ ಸಾಹಿತಿ (ಆಶು ಭಾಷಣ), ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಕರ್ನಾಟಕ/ ಹಿಂದೂಸ್ತಾನಿ ವಾದ್ಯ ಸಂಗೀತ.
ಸಮೂಹ ಸ್ಪರ್ಧೆಗಳು: (ಯುವ ಪ್ರತಿಭೆ ವಿಭಾಗ): ನಾಟಕ.
ಬಾಲಪ್ರತಿಭೆ ಸ್ಪರ್ಧೆಗೆ ವಯೋಮಿತಿ 8 ರಿಂದ 14 ವರ್ಷದೊಳಗಿರಬೇಕು. ಕಿಶೋರ ಪ್ರತಿಭೆ ಸ್ಪರ್ಧೆಗೆ ವಯೋಮಿತಿ 14 ರಿಂದ 18 ವರ್ಷದೊಳಗಿರಬೇಕು. ಯುವಪ್ರತಿಭೆ ಸ್ಪರ್ಧೆಗೆ ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ವಯಸ್ಸಿನ ದೃಢೀಕರಣಕ್ಕಾಗಿ ದಾಖಲೆಗಳನ್ನು ತಾವು ವ್ಯಾಸಂಗ ಮಾಡುತ್ತಿರುವ ವಿದ್ಯಾಸಂಸ್ಥೆಯಿಂದ ಪಡೆದು ಅರ್ಜಿಯ ಜೊತೆಗೆ ಲಗತ್ತಿಸಬೇಕು. ಜಿಲ್ಲಾಮಟ್ಟದ ಸ್ಪರ್ಧೆ ನಡೆಯುವ ದಿನಾಂಕವನ್ನು ನಂತರ ತಿಳಿಸಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರ ನೀಡಲಾಗುತ್ತದೆ
ಜಿಲ್ಲಾಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರನ್ನು ವಲಯ ಮಟ್ಟಕ್ಕೆ ಕಳುಹಿಸಿಕೊಡಲಾಗುತ್ತದೆ. ವಲಯ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. (ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಯಾವುದೇ ನಗದು ಪುರಸ್ಕಾರ ಇರುವುದಿಲ್ಲ, ವಲಯ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸುವವರಿಗೆ ಪ್ರಯಾಣ ವೆಚ್ಚವನ್ನು ನೀಡಲಾಗುತ್ತದೆ).
ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರತಿ ಪ್ರಕಾರದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನವಾಗಿ ತಲಾ 15,000 ರೂ., 10,000 ರೂ.,. 7,500 ರೂ ನಗದು ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ರಾಜ್ಯಮಟ್ಟದ ಅಂತಿಮ ಸಮೂಹ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ (ತಂಡಕ್ಕೆ) ಕ್ರಮವಾಗಿ 50,000 ರೂ., 40,000 ರೂ. ಹಾಗೂ 30,000 ರೂ.ನಗದು ಬಹುಮಾನವನ್ನು ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ನಿಗದಿತ ಅರ್ಜಿ ನಮೂನೆ ಇರುವುದಿಲ್ಲ. ಮೇಲ್ಕಂಡ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಬಿಳಿ ಹಾಳೆಯಲ್ಲಿ ಸ್ವ-ವಿವರಗಳನ್ನು ಭರ್ತಿ ಮಾಡಿ 2025ರ ನವೆಂಬರ್ 20ರ ಸಂಜೆ 5 ಗಂಟೆಯೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಛಯ, ಸೇಡಂ-ಶಹಾಬಾದ ವರ್ತುಲ ರಸ್ತೆ, ಕಲಬುರಗಿ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬೇಕು.
ವಿವಿಧ ಸ್ಪರ್ಧೆಗಳಿಗೆ ನಿಗದಿಪಡಿಸಿದ ಸಮಯ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-227734ಗೆ ಸಂಪರ್ಕಿಸಲು ಕೋರಲಾಗಿದೆ.







