ಕಲಬುರಗಿ | ಜಿಲ್ಲಾಧಿಕಾರಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಭವನ ವೀಕ್ಷಣೆ

ಕಲಬುರಗಿ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಸೋಮವಾರ ನಗರದ ಖರ್ಗೆ ಪೆಟ್ರೋಲ್ ಪಂಪ್-ಶಹಾಬಾದ್ ರಿಂಗ್ ರಸ್ತೆ ಮದ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭವನ ಕಾಮಗಾರಿ ವೀಕ್ಷಿಸಿದ ಅವರು, ಮಾರ್ಚ್-ಏಪ್ರಿಲ್ ಮಾಹೆಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಪಿ.ಡಬ್ಲ್ಯೂ.ಡಿ. ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಸುಭಾಷ್ ಅವರಿಗೆ ನಿರ್ದೇಶನ ನೀಡಿದರು.
ನಂತರ ಎಂ.ಬಿ.ನಗರ ಪೊಲೀಸ್ ಠಾಣೆ ಹತ್ತಿರ ಫುಟ್ ಬಾಲ್ ಕ್ರೀಡಾ ಅಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದಲ್ಲದೆ ಸೇಡಂ ರಸ್ತೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಇದೀಗ 2.50 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಭವನ ವೀಕ್ಷಿಸಿದ ಅವರು, ಶೀಘ್ರದಲ್ಲಿಯೆ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟಿಸಲಾಗುತ್ತಿದ್ದು, ಭವನದ ಎದುರಿನ ಉದ್ಯಾನವನ ಕೆಲಸ ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಕಲಬುರಗಿ ತಹಶೀಲ್ದಾರ್ ಕೆ.ಆನಂದಶೀಲ್ ಮತ್ತಿತರಿದ್ದರು.







