Kalaburagi | ನೀತಿ ಸಂಹಿತೆ ಉಲ್ಲಂಘನೆ ಆರೋಪ : ಸುಲೇಪೇಟ ಗ್ರಾ.ಪಂ. ಹರಾಜು ಮುಂದೂಡಲು ಸಾಯಿಬಣ್ಣ ಜಮಾದಾರ ಆಗ್ರಹ

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ, ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮ ಪಂಚಾಯಿತಿ ಹರಾಜು ಪ್ರಕ್ರಿಯೆ ನಡೆಸಲು ಪ್ರಕಟಣೆ ಹೊರಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನೀತಿ ಸಂಹಿತೆಯ ನಿಯಮ ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಿಬಣ್ಣ ಜಮಾದಾರ ಅವರು ಚುನಾವಣಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸುಲೇಪೇಟ ಗ್ರಾಮ ಪಂಚಾಯಿತಿ ಆಡಳಿತವು ಅಕ್ಟೋಬರ್ 13ರಂದು ಹರಾಜು ಪ್ರಕಟಣೆ ಹೊರಡಿಸಿದ್ದು, ಅಕ್ಟೋಬರ್ 16ರಂದು ಮಧ್ಯಾಹ್ನ 1 ಗಂಟೆಗೆ ಹರಾಜು ನಡೆಸುವುದಾಗಿ ತಿಳಿಸಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿರುವುದು ನಿಯಮಬಾಹಿರವಾಗಿದೆ ಎಂದು ಸಾಯಿಬಣ್ಣ ಜಮಾದಾರ ಅವರು ಮನವಿಯಲ್ಲಿ ಆರೋಪಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಹೊಸ ಟೆಂಡರ್‌ಗಳು ಅಥವಾ ಸಾರ್ವಜನಿಕ ಹರಾಜು ಪ್ರಕ್ರಿಯೆಗಳನ್ನು ಘೋಷಿಸುವ ಹಾಗೂ ನಡೆಸುವ ವಿಚಾರದಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಗ್ರಾಮ ಪಂಚಾಯಿತಿಯ ಆಸ್ತಿಗಳು, ಮರಗಳು, ಮರಳು ಸೇರಿದಂತೆ ಸ್ಥಳೀಯ ಸಂಪನ್ಮೂಲಗಳ ಹರಾಜು ಪ್ರಕ್ರಿಯೆಗಳನ್ನು ನಡೆಸುವಾಗಲೂ ಸಂಬಂಧಪಟ್ಟ ನಿಯಮಗಳು ಮತ್ತು ಅನುಮತಿಗಳನ್ನು ಪಾಲಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನೀತಿ ಸಂಹಿತೆ ಜಾರಿಗೆ ಬರುವುದಕ್ಕೂ ಮುನ್ನವೇ ಹರಾಜು ಪ್ರಕ್ರಿಯೆ ನಿಗದಿಯಾಗಿದ್ದರೆ, ಅದನ್ನು ಮುಂದುವರಿಸಲು ಅನ್ವಯಿಸುವ ನಿಯಮಗಳ ಪ್ರಕಾರ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿದೆ ಎಂದು ಮನವಿದಾರರು ತಿಳಿಸಿದ್ದಾರೆ.
ಆದ್ದರಿಂದ ಸುಲೇಪೇಟ ಗ್ರಾಮ ಪಂಚಾಯಿತಿ ಹೊರಡಿಸಿರುವ ಹರಾಜು ಪ್ರಕಟಣೆಯ ಕುರಿತು ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು ಹಾಗೂ ನೀತಿ ಸಂಹಿತೆ ಉಲ್ಲಂಘಿಸಿರುವುದು ದೃಢಪಟ್ಟಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಯಿಬಣ್ಣ ಜಮಾದಾರ ಆಗ್ರಹಿಸಿದ್ದಾರೆ.






