Kalaburagi | ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ಕೂಲಿ ಕಾರ್ಮಿಕ ಮೃತ್ಯು

ಪರಶುರಾಮ ಚಂದ್ರಕಾಂತ ದೇವಡೆ
ಆಳಂದ: ತೀವ್ರ ಬಿಸಿಲಿನ ತಾಪಕ್ಕೆ ಕೂಲಿ ಕಾರ್ಮಿಕನೊಬ್ಬರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಜಿಡಗಾ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತರನ್ನು ಜಿಡಗಾ ಗ್ರಾಮದ ಪರಶುರಾಮ ಚಂದ್ರಕಾಂತ ದೇವಡೆ (35) ಎಂದು ಗುರುತಿಸಲಾಗಿದೆ.
ವಿಬಿ-ಜಿ ರಾಮ್ಜಿ ಯೋಜನೆಯಡಿ ಜಿಡಗಾ ಗ್ರಾಮದಲ್ಲಿ ನಡೆಯುತ್ತಿದ್ದ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಪರಶುರಾಮ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಕಾಮಗಾರಿ ನಡೆಯುತ್ತಿದ್ದ ವೇಳೆ ತೀವ್ರ ಬಿಸಿಲಿನ ತಾಪದಿಂದ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಳೆ ಕೊರತೆಯಿಂದ ಈಗಾಗಲೇ ಬರದ ಛಾಯೆ ಆವರಿಸಿರುವ ಸಂದರ್ಭದಲ್ಲಿ ಬಿಸಿಲಿನ ತಾಪವೂ ತೀವ್ರಗೊಂಡಿದೆ. ಜಿಡಗಾ ಗ್ರಾಮದಲ್ಲಿ ನಡೆಯುತ್ತಿದ್ದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಪರಶುರಾಮ ಸೇರಿದಂತೆ ಸುಮಾರು 287 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಿಸಿಲಿನ ತಾಪ ತಾಳಲಾರದೆ ಪರಶುರಾಮ ಕುಸಿದು ಬಿದ್ದಿದ್ದು, ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪಿಡಿಒ ಶರಣಬಸಪ್ಪ ಪೂಜಾರಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






