Kalaburagi | ಬಾಲಕಿಯರ ಪಿಯು ಕಾಲೇಜು ಸ್ಥಾಪನೆಗೆ ಜಾಗ ಗುರುತಿಸದ ವಕ್ಫ್ ಮಂಡಳಿ: ವೆಲ್ಫೇರ್ ಪಾರ್ಟಿ ಅಸಮಾಧಾನ
ಜಾಗ ಗುರುತಿಸಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ವಕ್ಫ್ ಮಂಡಳಿಗೆ ಮನವಿ

ಕಲಬುರಗಿ : ರಾಜ್ಯದ 15 ಜಿಲ್ಲೆಗಳಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜುಗಳನ್ನು ಸ್ಥಾಪಿಸುವುದಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ 2024ರ ಡಿಸೆಂಬರ್ನಲ್ಲಿ ಘೋಷಿಸಿದ್ದರೂ, ಸುಮಾರು ಎರಡು ವರ್ಷ ಕಳೆದರೂ ಕಲಬುರಗಿಯಲ್ಲಿ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸದಿರುವುದಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ.
ಜಿಲ್ಲೆಯಲ್ಲಿ ಬಾಲಕಿಯರ ಪಿಯು ಕಾಲೇಜು ಸ್ಥಾಪನೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪಕ್ಷದ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಬುಧವಾರ ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ ರಾಜ್ಯ ವಕ್ಫ್ ಮಂಡಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಅನೇಕ ವಿದ್ಯಾರ್ಥಿನಿಯರು ಪಿಯು ಶಿಕ್ಷಣ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಸ್ಥಳೀಯವಾಗಿಯೇ ಕೈಗೆಟುಕುವ ದರದಲ್ಲಿ ಶಿಕ್ಷಣ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಕಾಲೇಜು ಆರಂಭವಾದರೆ ನೂರಾರು ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಾಲೇಜು ನಿರ್ಮಾಣಕ್ಕೆ ತಕ್ಷಣ ಸೂಕ್ತ ಜಾಗ ಗುರುತಿಸಿ, ಅದರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಮುಂದಿನ ಒಂದು ತಿಂಗಳೊಳಗೆ ಕಾಮಗಾರಿಗೆ ಅಧಿಕೃತ ಚಾಲನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ನಿಗದಿತ ಒಂದು ತಿಂಗಳೊಳಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ ಕಲಬುರಗಿ ವಕ್ಫ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್, ಕಲಬುರಗಿ ಜಿಲ್ಲಾಧ್ಯಕ್ಷ ಸಲೀಂ ಅಹ್ಮದ್ ಚಿತಾಪುರಿ ಹಾಗೂ ನಗರ ಅಧ್ಯಕ್ಷ ಮುನೀರ್ ಹಸ್ಮಿ ಉಪಸ್ಥಿತರಿದ್ದರು.






