Kalaburagi | ಬುದ್ಧಿಮತ್ತೆ, ಕಾವ್ಯತಂತ್ರದಲ್ಲಿ ವಾಲ್ಮೀಕಿಗೆ ಪಾಶ್ಚಾತ್ಯ ಕವಿಗಳು ಸರಿಸಾಟಿಯಲ್ಲ: ಗೀತಾ ಕುಲಕರ್ಣಿ

ಕಲಬುರಗಿ: ಬುದ್ಧಿಮತ್ತೆ, ಕಾವ್ಯತಂತ್ರ ಹಾಗೂ ಪ್ರಸ್ತುತತೆಯ ದೃಷ್ಟಿಯಿಂದ ಪಾಶ್ಚಾತ್ಯ ಕವಿಗಳು ಮಹರ್ಷಿ ವಾಲ್ಮೀಕಿಯವರ ಹತ್ತಿರವೂ ಸುಳಿಯಲಾರರು ಎಂದು ಗೀತಾ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಎನ್‌ಎಸ್‌ಎಸ್ ಘಟಕ, ಐಕ್ಯೂಎಸಿ ಹಾಗೂ ಸಂಸ್ಕೃತ ವಿಭಾಗದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮನುಷ್ಯ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ವಾಲ್ಮೀಕಿಯವರ ಜೀವನವೇ ಉತ್ತಮ ಉದಾಹರಣೆ ಎಂದರು.
ವಾಲ್ಮೀಕಿಯವರು ರಚಿಸಿದ ರಾಮಾಯಣದ ಪ್ರತಿಯೊಂದು ಪಾತ್ರವೂ ಮನುಕುಲಕ್ಕೆ ಪ್ರೇರಣೆಯಾಗಿದ್ದು, ಮಾನವ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಸಾರುತ್ತದೆ ಎಂದು ಹೇಳಿದರು.
ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ವಿಷ್ಣು ಎಸ್.ಗುಂಡಗುರ್ಕಿ ಮಾತನಾಡಿ, ಒಂದೆಡೆ ಮಹರ್ಷಿ ವಾಲ್ಮೀಕಿಯವರನ್ನು ಪೂಜಿಸುತ್ತಾ, ಮತ್ತೊಂದೆಡೆ ಅವರು ರಚಿಸಿದ ರಾಮಾಯಣವನ್ನು ದೂಷಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಯಾನಂದ ಎಂ. ಶಾಸ್ತ್ರಿ ಮಾತನಾಡಿ, ರಾಮಾಯಣ ಕಾಲದೊಂದಿಗೆ ಸಾಗುವ ಮಹಾಕಾವ್ಯವಾಗಿದ್ದು, ಮಾನವೀಯ ಮೌಲ್ಯಗಳ ಆಗರವಾಗಿದೆ. ಪ್ರತಿಯೊಬ್ಬರೂ ತಮ್ಮ ಕರ್ಮದ ಫಲವನ್ನು ತಾವೇ ಅನುಭವಿಸಬೇಕೇ ಹೊರತು, ಅದನ್ನು ಇತರರು ಅನುಭವಿಸಲು ಸಾಧ್ಯವಿಲ್ಲ ಎಂದರು.
ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಗೋವಿಂದ ಪೂಜಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿದರು. ಕುಮಾರಿ ರಶ್ಮಿ ಪ್ರಾರ್ಥನಾ ಗೀತೆ ಹಾಡಿದರು. ಡಾ. ಮಲ್ಲಿನಾಥ ಎಸ್. ತಳವಾರ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶ್ವಿನಿ ವಂದಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






