ಕಲಬುರಗಿ | ಕೆಕೆಆರ್‌ಡಿಬಿಯಲ್ಲಿ ಘೋಷಣೆಯಾದ ಯೋಜನೆಗಳು ಕಾರ್ಯರೂಪಕ್ಕೆ ತರುವುದು ಯಾವಾಗ?: ತಾಹೇರ್ ಹುಸೇನ್ ಪ್ರಶ್ನೆ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರತಿವರ್ಷ ಹಲವಾರು ಯೋಜನೆಗಳನ್ನು ಘೋಷಿಸುತ್ತಿದ್ದರೂ, ಅವುಗಳ ಅನುಷ್ಠಾನವು ಕೇವಲ 'ಕಾಗದ'ದಲ್ಲಿಯೇ ಉಳಿದಿವೆ, ಅವುಗಳು ಕಾರ್ಯರೂಪಕ್ಕೆ ಬರುವುದು ಯಾವಾಗ? ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಪ್ರಶ್ನಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅಡಿಯಲ್ಲಿ ಘೋಷಣೆಯಾದ 160ಕ್ಕೂ ಹೆಚ್ಚು ಕಾಮಗಾರಿಗಳು 2025ರ ಅಕ್ಟೋಬರ್ ತಿಂಗಳವರೆಗೂ ಪ್ರಾರಂಭವೇ ಆಗಿಲ್ಲ ಎಂದರು.
ಬಾಲಭವನ ನಿರ್ಮಾಣ, ಮಹಿಳಾ ಕ್ರೀಡಾ ಸಂಕೀರ್ಣದ 8 ಕಾಮಗಾರಿಗಳು, ಚಂದ್ರಕಾಂತ್ ಪಾಟೀಲ್ ಕ್ರೀಡಾಂಗಣಕ್ಕೆ ಸಂಬಂಧಿಸಿದ 12 ಕಾಮಗಾರಿಗಳು ಸೇರಿ ಒಟ್ಟು 45 ಕಾಮಗಾರಿಗಳಲ್ಲಿ ಒಂದೂ ಪ್ರಾರಂಭವಾಗಿಲ್ಲ. ಕೂಡಲೇ ಘೋಷಣೆಯಾಗಿರುವ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ನಗರದ ಎಂ.ಬಿ.ನಗರ, ಅಂಬಿಕಾ ನಗರ, ಮಹಾಗಾಂವ್‌ನಲ್ಲಿ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕ/ಬಾಲಕಿಯರ ವಸತಿ ನಿಲಯಗಳ ನಿರ್ಮಾಣ, ಮಿನಿ ವಿಧಾನಸೌಧದಲ್ಲಿ ಸಭಾಂಗಣ ನಿರ್ಮಾಣ, ಮಿಲ್ಲತ್ ನಗರದಲ್ಲಿ ರಸ್ತೆ ಕಾಮಗಾರಿಗಳು ಸೇರಿ ಒಟ್ಟು 25 ಕಾಮಗಾರಿಗಳಲ್ಲಿ ಒಂದೂ ಪ್ರಾರಂಭವಾಗಿಲ್ಲ. ಇಲ್ಲಿನ ಮೆಹಬೂಬ್ ಗುಲ್ಷನ್ ಗಾರ್ಡನ್ ಅಭಿವೃದ್ಧಿ, ರಾಜೀವ್ ಗಾಂಧಿ ಥೀಮ್ ಪಾರ್ಕ್ ಅಭಿವೃದ್ಧಿ, ಸೂಪರ್ ಮಾರ್ಕೆಟ್‌ನಲ್ಲಿ ಬಹುಮಟ್ಟದ ಕಾರ್ ಪಾರ್ಕಿಂಗ್, ಡಾಗ್ ಶೆಲ್ಟರ್ ನಿರ್ಮಾಣ, ಶರಣಬಸವೇಶ್ವರ ಕೆರೆ ಅಭಿವೃದ್ಧಿ ಸೇರಿದಂತೆ ಒಟ್ಟು 13 ಕಾಮಗಾರಿಗಳಲ್ಲಿ ಒಂದೂ ಪ್ರಾರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಜಿಟಲ್ ಕ್ಲಾಸ್ ರೂಮ್, ಡಿಜಿಟಲ್ ಲೈಬ್ರರಿ, RO ವಾಟರ್ ಪ್ಲಾಂಟ್ ಸೇರಿ ಒಟ್ಟು 15 ಕಾಮಗಾರಿಗಳು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ 9 ಕಾಮಗಾರಿಗಳು ಸೇರಿದಂತೆ ಒಂದು ಕಾಮಗಾರಿಯೂ ಆರಂಭವಾಗಿಲ್ಲ ಎಂದು ದೂರಿದರು.
ಹಲವು ಕಾಮಗಾರಿಗಳು ಈವರೆಗೆ ಪ್ರಾರಂಭವಾಗಿಲ್ಲ, ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಅನುಮಾನ ಎದ್ದು ಕಾಣುತ್ತಿದೆ, ಕೂಡಲೇ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್, ಜಿಲ್ಲಾ ಅಧ್ಯಕ್ಷ ಸಲೀಂ ಚಿತಾಪುರಿ, ಜಿಲ್ಲಾ ಕಾರ್ಯದರ್ಶಿ ಮುನೀರ್ ಹಶ್ಮಿ, ಸಲೀಂ ಸಾಗರಿ, ಅಕ್ರಮ, ನಸೀರ್ ಕಲ್ಯಾಣಿ ಮತ್ತಿತರರು ಇದ್ದರು.







