Kalaburagi | ಪರಾರಿಯಾಗಿದ್ದ ಕೈದಿಯನ್ನು ಬಂಧಿಸಿದ್ದು ಯಾರು?: ಸ್ಪಷ್ಟನೆಗೆ ಅವ್ವಣ್ಣಾ ಮ್ಯಾಕೇರಿ ಒತ್ತಾಯ

ಕಲಬುರಗಿ : ಇತ್ತೀಚೆಗೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳಲ್ಲಿ ಓರ್ವನಾದ ಸಂತೋಷ್‌ನನ್ನು ನಿಜವಾಗಿ ಯಾರು ಬಂಧಿಸಿದ್ದಾರೆ ಎಂಬುದನ್ನು ಸರ್ಕಾರ ಹಾಗೂ ಗೃಹ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣಾ ಮ್ಯಾಕೇರಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾರ್ತಾ ಭಾರತಿ’ ವರದಿಯನ್ನು ಉಲ್ಲೇಖಿಸಿ, ಪರಾರಿಯಾಗಿದ್ದ ಕೈದಿ ಸಂತೋಷ್‌ನನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ ಎಂದು ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದರೆ, ಮರುದಿನ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಅವರು ಕಪನೂರ ಸಮೀಪ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಎರಡೂ ಹೇಳಿಕೆಗಳಲ್ಲಿ ಯಾವುದು ಸತ್ಯ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಅಪರಾಧಿಗಳನ್ನು ಬಂಧಿಸುವ ವಿಚಾರದಲ್ಲಿ ವಿವಿಧ ಪೊಲೀಸ್ ಅಧಿಕಾರಿಗಳ ಹೇಳಿಕೆಗಳಲ್ಲಿ ಗೊಂದಲವಿರುವುದು ಸಾರ್ವಜನಿಕರಲ್ಲಿ ಪೊಲೀಸ್ ವ್ಯವಸ್ಥೆಯ ಮೇಲಿನ ವಿಶ್ವಾಸ ಕುಗ್ಗುವಂತೆ ಮಾಡಿದೆ ಎಂದು ಅವರು ಆರೋಪಿಸಿದರು.
ಜುಲೈ 14ರಂದು ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಿನಿಮೀಯ ರೀತಿಯಲ್ಲಿ ಕೈದಿಗಳು ಪರಾರಿಯಾಗಿರುವುದು ಪೊಲೀಸ್ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. ಪರಾರಿಯಾಗಿದ್ದ ಕೈದಿಯನ್ನು ಬಂಧಿಸಿರುವುದು ಸ್ವಾಗತಾರ್ಹವಾದರೂ, ಬಂಧನ ನಡೆದ ಸ್ಥಳ ಹಾಗೂ ಸಂದರ್ಭದ ಬಗ್ಗೆ ಅಧಿಕಾರಿಗಳ ಪರಸ್ಪರ ವಿರುದ್ಧ ಹೇಳಿಕೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಇನ್ನೂ ಪರಾರಿಯಾಗಿರುವ ಇಬ್ಬರು ಕೈದಿಗಳನ್ನು ಶೀಘ್ರ ಬಂಧಿಸಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೊಲೆ, ದರೋಡೆ, ಸುಲಿಗೆ, ಗಾಂಜಾ ಹಾಗೂ ಮಟಕಾ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಬಂಟ್ವಾಳದಲ್ಲಿ ನಡೆದ ಯುವತಿಯ ಹತ್ಯೆ ಹಾಗೂ ಅಫಜಲಪುರ ಠಾಣೆ ವ್ಯಾಪ್ತಿಯ ಆರೋಪಿ ಪರಾರಿ ಪ್ರಕರಣವನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೃಹ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಮುದ್ರಕಿ, ಶಂಕರ ಹರವಾಳ, ಮಲ್ಲಣ್ಣ ಕುಲಕರ್ಣಿ, ಗಿರೀಶ್ ಭಜಂತ್ರಿ, ಈರಣ್ಣ ಹಡಪದ ಇದ್ದರು.






