ಕಲಬುರಗಿ | ವರದಕ್ಷಿಣೆ ತರದಿದ್ದಕ್ಕೆ ಬೀದಿಯಲ್ಲೇ ಪತ್ನಿ, ಮಾವನಿಗೆ ಆಳಿಯನಿಂದ ಮಾರಣಾಂತಿಕ ಹಲ್ಲೆ; ಪ್ರಕರಣ ದಾಖಲು

ಕಲಬುರಗಿ: ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಣ್ಣ ಸಂಗೋಳಗಿ ಗ್ರಾಮದಲ್ಲಿ ವರದಕ್ಷಿಣೆ ತರದಿದ್ದಕ್ಕೆ ಹೆಂಡತಿ ಹಾಗೂ ಮಾವನಿಗೆ ನಡು ಬೀದಿಯಲ್ಲೇ ಅಳಿಯ ಮತ್ತು ಆತನ ಕುಟುಂಬಸ್ಥರು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದವರನ್ನು ಶ್ರೇಯಾ, ಅವರ ತಂದೆ ವಿರೂಪಾಕ್ಷ ಮುಸ್ಕೆ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ, ಗಾಯಾಳುಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಕಲಕೋಟ ಪಟ್ಟಣದ ಶ್ರೇಯಾ ಎಂಬವರನ್ನು ಆಳಂದ ತಾಲೂಕಿನ ಬಸವನ ಸಂಗೊಳಗಿ ಗ್ರಾಮದ ಬಸವರಾಜ ಚನ್ನವೀರಪ್ಪ ಮಾಯಿ ಎಂಬುವರೊಂದಿಗೆ ಆರು ವರ್ಷಗಳ ಹಿಂದೆ (31 ಡಿಸೆಂಬರ್ 2019ರಂದು) ವಿವಾಹ ಮಾಡಿಕೊಡಲಾಗಿತ್ತು. ಆ ವೇಳೆ 129 ಗ್ರಾಂ ಚಿನ್ನ, 1.25 ಲಕ್ಷ ರೂಪಾಯಿ ವರದಕ್ಷಿಣೆ ನೀಡಲಾಗಿತ್ತು. ಎರಡು ವರ್ಷದವರೆಗೆ ಇಬ್ಬರೂ ದಂಪತಿಗಳ ಮಧ್ಯೆ ಅನ್ನಯೋನ್ಯತೆಯಿತ್ತು ಎಂದು ತಿಳಿದು ಬಂದಿದೆ.
ಆದರೆ, ಮಗು ಜನಿಸಿದ ಒಂದು ವರ್ಷದ ಬಳಿಕ ತವರಿನಿಂದ ಮತ್ತೆ 1 ಲಕ್ಷ ರೂ ಹಣ, ಹಾಗೂ 58 ಗ್ರಾಂ ಚಿನ್ನ ತರುವಂತೆ, ಶ್ರೇಯಾಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವಿರೂಪಾಕ್ಷ ಅವರು ಮಗಳನ್ನು ಒಂದೂವರೆ ವರ್ಷದಿಂದ ಮನೆಯಲ್ಲೇ ಇರಿಸಿಕೊಂಡಿದ್ದರು. ಮೇ 29 ರಂದು ಮಗಳು ಶ್ರೇಯಾರನ್ನು ಕರೆದುಕೊಂಡು ವಿರೂಪಾಕ್ಷ ಮುಸ್ಕೆ ಅವರು, ಕುಟುಂಬಸ್ಥರು ಹಾಗೂ ಕೆಲವು ಮುಖಂಡರ ಜೊತೆಗೆ ಅಳಿಯ ಬಸವರಾಜ ಚನ್ನವೀರಪ್ಪ ಮಾಯಿನ ಮನೆಗೆ ಹೋದಾಗ ಅಳಿಯ ಹಾಗೂ ಆತನ ಸಹೋದರ ಮೋಹನಂದ ಚನ್ನವೀರಪ್ಪ ಮಾಯಿ ನಡು ಬೀದಿಯಲ್ಲೇ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ವಿರೂಪಾಕ್ಷ ಮುಸ್ಕೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ನರೋಣಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿದ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ಬಸವರಾಜ ಹಾಗೂ ಆತನ ತಂದೆ ಚನ್ನವೀರಪ್ಪ, ತಾಯಿ ಗುಂಡಮ್ಮ, ಸಹೋದರ ಮೋಹನಂದ, ಶ್ರೀದೇವಿ ಮೋಹನಂದ, ಗಜಾನಂದ ಹಾಗೂ ಶಿವುಕುಮಾರ ಸೇರಿ ಏಳು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.







