Kalaburagi | ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನದ ನಿರ್ಧಾರ ಹಿಂಪಡೆಯಿರಿ : ತಿಪ್ಪಣ್ಣಪ್ಪ ಕಮಕನೂರ
"ತಳವಾರ ಸಮಾಜದ ಎಸ್‌ಟಿ ಪ್ರಮಾಣಪತ್ರದ ಸಮಸ್ಯೆಯನ್ನು ಸಿಎಂ ಜತೆ ಚರ್ಚಿಸಿ ಪರಿಹಾರ"

ಕಲಬುರಗಿ: ತಳವಾರ ಸಮಾಜದವರಿಗೆ ಎಸ್‌ಟಿ ಪ್ರಮಾಣಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸುವುದಾಗಿ ಕೆಲ ಮುಖಂಡರು ಹೇಳಿರುವುದು ಸರಿಯಲ್ಲ. ಸಮಾಜದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾತುಕತೆ ಮೂಲಕ ಪರಿಹರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಬದಲು ತಳವಾರ ಸಮಾಜದ ಮುಖಂಡರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಕಪ್ಪು ಬಾವುಟ ಪ್ರದರ್ಶಿಸುವ ನಿರ್ಧಾರವನ್ನು ಹಿಂಪಡೆದು ಹೋರಾಟ ಕೈಬಿಡುವಂತೆ ಮನವಿ ಮಾಡಿದರು.
ತಳವಾರ ಸಮಾಜದ ಎಸ್‌ಟಿ ಪ್ರಮಾಣಪತ್ರ ಸಮಸ್ಯೆ ಕುರಿತು ಗ್ರೇಡ್-2 ತಹಶೀಲ್ದಾರ್‌ಗಳ ಸಭೆ ನಡೆಸಲಾಗಿದ್ದು, ಮೂಲ ದಾಖಲೆಗಳು ಸರಿಯಾಗಿರುವ ಅರ್ಹ ಫಲಾನುಭವಿಗಳಿಗೆ ಎಸ್‌ಟಿ ಪ್ರಮಾಣಪತ್ರ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅರ್ಹರಿಗೆ ಯಾವುದೇ ತೊಂದರೆಯಾಗದಂತೆ ಪ್ರಮಾಣಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ 35 ಸಾವಿರಕ್ಕೂ ಹೆಚ್ಚು ತಳವಾರ ಸಮುದಾಯದವರಿಗೆ ಎಸ್‌ಟಿ ಪ್ರಮಾಣಪತ್ರ ವಿತರಿಸಲಾಗಿದ್ದು, ಸುಮಾರು 300 ಅರ್ಜಿಗಳು ಮಾತ್ರ ಬಾಕಿ ಇವೆ. ಅಫಜಲಪುರ ಮತ್ತು ಜೇವರ್ಗಿ ತಾಲೂಕುಗಳಲ್ಲಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಮಸ್ಯೆಗಳಿದ್ದು, ಅವುಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೂವರು ಸಚಿವರಿದ್ದು, ಯಾವುದೇ ಕಾರಣಕ್ಕೂ ತಳವಾರ ಸಮಾಜಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಸಮಾಜದ ಸಮಸ್ಯೆಗಳಿದ್ದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಕಮಕನೂರ ಹೇಳಿದರು.
ತಳವಾರ ಸಮಾಜದ ಮುಖಂಡರು ಪದೇಪದೇ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಪ್ರತಿಭಟನೆಯ ಬದಲು ಸರ್ಕಾರದೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ತಳವಾರ ಸಮಾಜದ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದರು.






