ಕಲಬುರಗಿ | ಸಂವಿಧಾನ ಇಲ್ಲದಿದ್ದರೆ ಹಿಂಸಾತ್ಮಕ ಕ್ರಾಂತಿಗಳಾಗುತ್ತಿದ್ದವು : ಹರ್ಷಕುಮಾರ್ ಕುಗ್ವೆ

ಕಲಬುರಗಿ: "ಭಾರತ ದೇಶದಲ್ಲಿ ಒಂದು ವೇಳೆ ಬಾಬಾ ಸಾಹೇಬರು ಬರೆದಿರುವ ಸಂವಿಧಾನವೇ ಇಲ್ಲದಿದ್ದರೆ ಅನೇಕ ಹಿಂಸಾತ್ಮಕ ಕ್ರಾಂತಿಗಳಾಗುತ್ತಿದ್ದವು" ಎಂದು ಪತ್ರಕರ್ತ, ಸಾಮಾಜಿಕ ಹೋರಾಟಗಾರ ಹರ್ಷಕುಮಾರ್ ಕುಗ್ವೆ ಅಭಿಪ್ರಾಯಪಟ್ಟಿದ್ದಾರೆ.
ಸುಮೇಧ ಪ್ರಕಾಶನ ವತಿಯಿಂದ ನಗರದ ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡ 'ಒಂದು ವೇಳೆ ಬಾಬಾಸಾಹೇಬರು ಇಲ್ಲದಿದ್ದರೆ' ಹಾಗೂ 'ಅಂಬೇಡ್ಕರ್ ಸ್ಮೃತಿ - ಸಂಸ್ಮೃತಿ' ಎಂಬ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ಹಿಂಸಾತ್ಮಕ ಕ್ರಾಂತಿ ಉಂಟಾಗಿಲ್ಲ ಎಂದಾದರೆ ಅದಕ್ಕೆ ಸಂವಿಧಾನವೇ ಕಾರಣ ಎಂದರು.
ಸಮಾಜದಲ್ಲಿ ನಿತ್ಯವೂ ಮರ್ಯಾದಾ ಹತ್ಯೆ, ಕೊಲೆ, ದರೋಡೆ, ಸುಲಿಗೆ, ಜಾತಿ ನಿಂದನೆ ಮತ್ತಿತ್ತರ ಕೃತ್ಯಗಳು ನಡೆಯುತ್ತಿವೆ, ದಾಳಿಗೊಳಗಾದವರು ತಮಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಕಾನೂನನ್ನು ನಂಬಿಕೊಂಡು ಇದ್ದಾರೆ, ಒಂದು ವೇಳೆ ಬಾಬಾ ಸಾಹೇಬ್ ರಚಿತದ ಸಂವಿಧಾನ ಇಲ್ಲದಿದ್ದರೆ ದೇಶದ ಇತಿಹಾಸದ ಕಲ್ಪನೆ ಕೂಡ ಮಾಡುವಂತಿರಲಿಲ್ಲ ಎಂದರು.
ಗುಜರಾತಿನ ವಿಮಾನ ದುರಂತ ಸಂಭವಿಸಿದಾಗ ಪೈಲೆಟ್ ತಪ್ಪಿನಿಂದಾಗಿ ಹಲವು ಪ್ರಾಣ ಕಳೆದುಕೊಂಡರು. ಮೃತಪಟ್ಟವರಿಗೆ 1 ಕೋಟಿ ರೂ. ಘೋಷಣೆ ಮಾಡಿರುವ ಕೇಂದ್ರ ಸರಕಾರ, ಮಲದ ಗುಂಡಿಯನ್ನು ಸ್ವಚ್ಛಗೊಳಿಸುವ ವೇಳೆಯಲ್ಲಿ ಮೃತಪಟ್ಟವರಿಗೇಕೆ ಕಡಿಮೆ ಪರಿಹಾರ ಕೊಡುತ್ತದೆ? ಎಂದು ಪ್ರಶ್ನಿಸಿದ ಅವರು, ಉದ್ದೇಶಪೂರ್ವಕವಾಗಿ ಜಾತಿಯನ್ನು ಖಾಯಂ ಆಗಿ ಇಡುವುದಕ್ಕಾಗಿಯೇ ಮಲದ ಗುಂಡಿಯನ್ನು ಸ್ವಚ್ಛಗೊಳಿಸುವ ಯಂತ್ರವನ್ನು ಶೋಧಿಸುತ್ತಿಲ್ಲ, ಬಳಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಲೇಖಕ ಹಾಗೂ "ಅಂಬೇಡ್ಕರ್ ಸ್ಮೃತಿ ಸಂಸ್ಮೃತಿ" ಪುಸ್ತಕದ ಅನುವಾದಕ ಆರ್.ಕೆ ಹುಡಗಿ(ರಾಹು) ಅವರು, ಪುಸ್ತಜಗಳನ್ನು ಓದುವುದರ ಮೂಲಕ ಭೀಮನಿಂದ ಅಂಬೇಡ್ಕರ್ ರಾದರು ಎಂದು ಹೇಳಿದರು.
ಡಾ.ವಿಕ್ರಮ್ ವಿಸಾಜಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ ಶರಣಪ್ಪ ಸುಲಗುಂಟೆ, ಪ್ರಕಾಶಕ ಡಾ.ದತ್ತಾತ್ರಯ ಇಕ್ಕಳಕಿ ಅವರು ಮಾತನಾಡಿದರು.
ನಿವೃತ್ತ ಅಭಿಯಂತರರಾದ ಬಿ.ಆರ್.ಬುದ್ಧಾ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ.ಅಪ್ಪಗೆರೆ ಸೋಮಶೇಖರ್ ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ಬಸಣ್ಣ ಸಿಂಗೆ, ಸೂರ್ಯಕಾಂತ್ ಸುಜ್ಯತ್, ಶ್ರೀಶೈಲ ಘೂಳಿ, ನಾಗೇಂದ್ರ ಜವಳಿ, ಶ್ರೀಶೈಲ ನಾಗರಾಳ, ಹಣಮಂತ ಬೋಧನಕರ್, ಪಿ.ನಂದಕುಮಾರ್, ಪ್ರೇಮಾನಂದ ಚಿಂಚೋಳಿ, ಸಿದ್ದರಾಮ ಪ್ಯಾಟೆ, ಶಾಂತಕುಮಾರ್ ಹೆಬಳಿ, ವೆಂಕಟರೆಡ್ಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಶೋಕ್ ಶಟಕಾರ ನಿರೂಪಿಸಿದರು, ರಮೇಶ್ ಮಾಡಿಯಾಲ್ಕರ್ ಸ್ವಾಗತಿಸಿದರು.







