ಕಲಬುರಗಿ | ಮಹಿಳೆಯನ್ನು ಕೊಲೆಗೈದು ಸುಟ್ಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಕಲಬುರಗಿ: ವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಲಾಡ್ಲಾಪುರ ಗ್ರಾಮದ ಸಮೀಪ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೋರ್ವಳ ಮೃತದೇಹ ಪತ್ತೆಯಾಗಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇದೊಂದು ಕೊಲೆ ಕೃತ್ಯ ಎಂದು ತನಿಖೆಯಿಂದ ತಿಳಿದುಬಂದಿದೆ.
ಕ್ಲಿಷ್ಟಕರವಾಗಿದ್ದ ಪ್ರಕರಣದಲ್ಲಿ ಕೊಲೆಯಾದ ಮಹಿಳೆಯ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಲೆಯಾದ ಮಹಿಳೆಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಯಾರ್ ತಾಂಡಾದ ನಿವಾಸಿ ದೇವಿಬಾಯಿ ಲಾಲಸಿಂಗ್ ರಾಠೋಡ್(42) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ದೇವಿವಾಯಿ ಜೊತೆಗೆ ಸಹಜೀವನ ನಡೆಸುತ್ತಿದ್ದ ಸೋಮಲು ಠಾಕೂರ್ ಪವಾರ್(53) ಮತ್ತು ಹಾಮು ಅಲಿಯಾಸ್ ಪಪ್ಪು ಲಾಲು ರಾಥೋಡ್ ಕೊಲೆ ಆರೋಪಿಗಳಾಗಿದ್ದಾರೆ. ಇವರು ದೇವಿಬಾಯಿಯನ್ನು ಕೊಲೆ ಮಾಡಿದ ಬಳಿಕ ಪೆಟ್ರೋಲ್ ನಿಂದ ಸುಟ್ಟು ಹಾಕಿದ್ದಾರೆ ಎಂದು ತಿಳಿಸಿದರು.
ಆರೋಪಿತರು ದೇವಿಬಾಯಿಯನ್ನು ಕೊಲೆಗೈದ ಬಳಿಕ ಯಾವುದಾದರೂ ನದಿಗೆ ಎಸೆಯುವ ಉದ್ದೇಶದಿಂದ ಮೃತದೇಹವನ್ನು 11 ಗಂಟೆಗಳ ಕಾಲ ಕಾರಿನಲ್ಲಿ ಇಟ್ಟುಕೊಂಡಿದ್ದರು. ನದಿಗೆ ಎಸೆಯಲು ಸಾಧ್ಯವಾಗದಿದ್ದಾಗ ಯಾವುದೇ ಗುರುತು ಸಾಕ್ಷಿ, ಪತ್ತೆ ಸಿಗಬಾರದು ಎಂಬ ಉದ್ದೇಶದಿಂದ ದೇವಿಬಾಯಿಯ ಮೃತದೇಹವನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ ಎಸ್ಪಿ ಮಾಹಿತಿ ನೀಡಿದರು.
ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ದೇವಿಬಾಯಿಯ ತಾಳಿಯ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
ಮೃತದೇಹದ ಗುರುತು ಪತ್ತೆ ಮಾಡುವುದು ಮತ್ತು ಆರೋಪಿತರ ಪತ್ತೆ ಸವಾಲಿನ ಕೆಲಸವಾಗಿತ್ತು. ಈ ವಿಶೇಷ ಪ್ರಕರಣವನ್ನು ಭೇದಿಸಲು ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು ಕೇವಲ ಮೂರು ದಿನಗಳಲ್ಲಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ್ ತಿಗಡಿ, ಪಿಎಸ್ಸೈ ತಿರುಮಲೇಶ್ ಮತ್ತಿತರರು ಉಪಸ್ಥಿತರಿದ್ದರು.







