ಕಲಬುರಗಿ | ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆ: ಪತಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ಮೇಳಕುಂದಾ(ಕೆ) ಗ್ರಾಮದ ಸಮೀಪದ ಹೊಲದ ಬಾವಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸೇರಿದಂತೆ ನಾಲ್ವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆಯನ್ನು ಲಕ್ಷ್ಮಿ ಅಂಬ್ರಿಶ್ ಕುಂಬಾರ(30) ಎಂದು ಗುರುತಿಸಲಾಗಿದೆ. ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಳಚಾಪುರ ಗ್ರಾಮದ ನಿವಾಸಿಯಾಗಿದ್ದರು.
ಲಕ್ಷ್ಮಿ ಅವರಿಗೆ 2017ರಲ್ಲಿ ಮೇಳಕುಂದಾ (ಕೆ) ಗ್ರಾಮದ ಅಂಬ್ರಿಶ್ ಕುಂಬಾರ ಎಂಬಾತನೊಂದಿಗೆ ವಿವಾಹವಾಗಿತ್ತು. ಅಂಬ್ರಿಶ್‌ಗೆ ಈ ಮೊದಲು ಕೂಡ ವಿವಾಹವಾಗಿದ್ದು, ಮೊದಲ ಪತ್ನಿ ಬೇರ್ಪಟ್ಟಿದ್ದರು.ಇತ್ತೀಚೆಗೆ ಮೊದಲ ಪತ್ನಿ ಮರಳಿ ಬಂದ ನಂತರ ಮನೆಯಲ್ಲಿ ಜಗಳ ನಡೆಯುತ್ತಿದ್ದವು ಎಂದು ತಿಳಿದು ಬಂದಿದೆ.
ಲಕ್ಷ್ಮಿಗೆ ಪತಿ, ಅತ್ತೆ, ಮಾವ ಹಾಗೂ ಮೈದುನ ನಿರಂತರ ಕಿರುಕುಳ ನೀಡುತ್ತಿದ್ದರು. ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ಬಾವಿಗೆ ಎಸೆಯಲಾಗಿದೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಮೃತಳ ತಂದೆ ಸುಭಾಷ್ ಕುಂಬಾರ ನೀಡಿದ ದೂರಿನ ಮೇರೆಗೆ ಪತಿ ಅಂಬ್ರಿಶ್ ಕುಂಬಾರ, ಮಾವ ನರಸಿಂಗ, ಅತ್ತೆ ದೇವತಾ ಹಾಗೂ ಮೈದುನ ಲೋಕೇಶ್ ವಿರುದ್ಧ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




