ಕಲಬುರಗಿ | ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನಿಗೆ ಗಂಭೀರ ಗಾಯ: 25ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹ

ಕಲಬುರಗಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುವ ವೇಳೆ ಗಂಭೀರವಾಗಿ ಗಾಯಗೊಂಡ ದಲಿತ ಭೋವಿ ವಡ್ಡರ ಸಮಾಜದ ಕಾರ್ಮಿಕ ಸೂರ್ಯಕಾಂತ ರಾಮ ಮಂಜಳಕರ್ ಅವರಿಗೆ ನ್ಯಾಯ ಒದಗಿಸಬೇಕು, ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕಲಬುರಗಿ ಜಿಲ್ಲಾ ಭೋವಿ ವಡ್ಡರ ಸಮಾಜದ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ತಿಮ್ಮಾಪುರ ಚೌಕದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಾಜದ ಮುಖಂಡರು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬ್ರಹ್ಮಪುರ ಬಡಾವಣೆಯ ನಿವಾಸಿಯಾಗಿರುವ ಕೂಲಿ ಕಾರ್ಮಿಕ ಸೂರ್ಯಕಾಂತ ರಾಮ ಮಂಜಳಕರ್ ಅವರು ಎಪ್ರಿಲ್ 21ರಂದು ಗಾಜಿಪುರ ಬಡಾವಣೆಯ ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೆಲಸದ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದಿರುವುದು ಈ ದುರ್ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಸೂರ್ಯಕಾಂತ ಅವರ ಎರಡೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಮೊಣಕಾಲಿನ ಚಿಪ್ಪು ಮುರಿದು ಶಾಶ್ವತ ಅಂಗವೈಕಲ್ಯದ ಸ್ಥಿತಿ ಎದುರಾಗಿದೆ. ಹಲವು ಶಸ್ತ್ರಚಿಕಿತ್ಸೆಗಳ ಬಳಿಕವೂ ಅವರು ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದು, ಕುಟುಂಬದ ಜೀವನೋಪಾಯವೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಘಟನೆಯ ನಂತರ ಗುತ್ತಿಗೆದಾರ ಅಣ್ಣಯ್ಯ ಅವರು ಪೊಲೀಸರ ಸಮ್ಮುಖದಲ್ಲಿ 7 ಲಕ್ಷ ಪರಿಹಾರ ನೀಡುವುದಾಗಿ ಲಿಖಿತ ಭರವಸೆ ನೀಡಿದ್ದರೂ, ಇದುವರೆಗೆ ಹಣ ಪಾವತಿಸದೆ ಕುಟುಂಬವನ್ನು ಸತಾಯಿಸುತ್ತಿದ್ದು, ಜೀವ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಲಾಗಿದೆ.
ಸೂರ್ಯಕಾಂತ ಅವರ ಕುಟುಂಬದಲ್ಲಿ ಪತ್ನಿ ಹಾಗೂ ಮೂವರು ಅಪ್ರಾಪ್ತ ಹೆಣ್ಣುಮಕ್ಕಳಿದ್ದು, ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಅವರು ಈಗ ದುಡಿಯಲು ಅಸಮರ್ಥರಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ಕುಟುಂಬಕ್ಕೆ 75 ಲಕ್ಷ ಪರಿಹಾರ ನೀಡಬೇಕು, ಮೂವರು ಹೆಣ್ಣುಮಕ್ಕಳ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸಬೇಕು ಹಾಗೂ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಹಾಗೂ ಶ್ರೀ ಸಿದ್ಧರಾಮೇಶ್ವರ ಭೋವಿ ವಡ್ಡರ ಸಂಘದ ಸಂಸ್ಥಾಪಕ ಅಧ್ಯಕ್ಷ ರವಿಚಂದ್ರ ಗುತ್ತೇದಾರ, “ಬಡ ಕಾರ್ಮಿಕನಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಕಾರ್ಮಿಕರ ಸುರಕ್ಷತೆಯನ್ನು ನಿರ್ಲಕ್ಷಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಠಲ ನೆಲೋಗಿ, ಹರಿಬಾಬು ದೋತ್ರೆ, ಸುರೇಶ ಸಾಗರ, ತಿಮ್ಮಯ್ಯ ದೇವಕರ, ಲಕ್ಷ್ಮಣ, ಸುರೇಶ, ಹೀರಾ, ಪರಶುರಾಮ, ಸಂಜು, ವೆಂಕಟೇಶ, ಮಂಜುನಾಥ, ಶಾಮರಾವ ಸೇರಿದಂತೆ ಭೋವಿ ವಡ್ಡರ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.






