Kalaburagi | ಮಹಿಳೆಯರ ಆರೋಗ್ಯ ಜಾಗೃತಿಗಾಗಿ ‘ವಿಶ್ವ ನಡಿಗೆ’ ಕಾರ್ಯಕ್ರಮ

ಕಲಬುರಗಿ: ಮಹಿಳೆಯರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಐದು ಇನ್ನರ್ ವೀಲ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ‘ವಿಶ್ವ ನಡಿಗೆ’ ಕಾರ್ಯಕ್ರಮ ಆಯೋಜಿಸಲಾಯಿತು.
‘ಆರೋಗ್ಯವಂತ ಮಹಿಳೆಯರು, ಸಂತೋಷದ ಕುಟುಂಬ’ ಎಂಬ ಘೋಷವಾಕ್ಯದೊಂದಿಗೆ ನಡೆದ ನಡಿಗೆಯಲ್ಲಿ ಐದು ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ನಗರದ ಜಗತ್ ವೃತ್ತದಿಂದ ರೋಟರಿ ಶಾಲೆಯವರೆಗೆ ನಡೆದ ನಡಿಗೆಯ ಮೂಲಕ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂಬ ಸಂದೇಶ ಸಾರಲಾಯಿತು.
ನಂತರ ರೋಟರಿ ಶಾಲೆಯ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಬಿಲ್ವಾ ಆಸ್ಪತ್ರೆಯ ಡಾ. ರೇಣುಪ್ರಸಾದ್ ಎಂ. ಚಿಕ್ಮತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆದಿ ಜಗನ್ನಾಥ ಆಸ್ಪತ್ರೆಯ ಡಾ. ಜಯಶ್ರೀ ಎಸ್. ರೆಡ್ಡಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಹಿಳೆಯರ ಆರೋಗ್ಯ, ದೈಹಿಕ ಕ್ಷಮತೆ ಹಾಗೂ ಒಟ್ಟಾರೆ ಯೋಗಕ್ಷೇಮದ ಕುರಿತು ಮಾಹಿತಿ ನೀಡಿದರು. ಮಹಿಳೆಯರು ಆರೋಗ್ಯದ ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ. ಸುಧಾ ಹಾಲಕಾಯಿ, ಸಂಧ್ಯಾ ಕಾನೇಕರ್, ಐದು ಕ್ಲಬ್‌ಗಳ ಅಧ್ಯಕ್ಷರಾದ ಜ್ಯೋತಿ ರಾಥೋಡ್, ಸವಿತಾ ಹಲಹಳ್ಳಿ, ಸಾರಿಕಾ ರಂಗದಾಳ್, ರುತುಜಾ ಶಿಶ್, ಡಾ. ಸ್ನೇಹಾ ರೆಡ್ಡಿ, ಕಾರ್ಯದರ್ಶಿಗಳಾದ ಚನ್ನಮ್ಮ ಯತ್ನಾಳ್, ಜಯಾ ಜೈನ್, ಮನೀಶ್, ರುತುಜಾ, ಶಿಲ್ಪಾ, ಡಾ. ಪ್ರಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಸ್.ಎಸ್. ಟೆಕ್ನೋ ಕಾಲೇಜಿನ ಉಪನ್ಯಾಸಕಿ ರೇಣುಕಾ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಎಸ್.ಎಸ್. ತೆಗನೂರ ಕಾಲೇಜಿನ ವಿದ್ಯಾರ್ಥಿಗಳು, ಐದು ಇನ್ನರ್ ವೀಲ್ ಕ್ಲಬ್‌ಗಳ ಸದಸ್ಯರು ಮತ್ತು ರೋಟರಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಬಿರಾದಾರ, ಬಾಬುರಾವ ತಳವಾರ ಭಾಗವಹಿಸಿದ್ದರು.






