ಕಲಬುರಗಿ | ಬೆಂಗಳೂರಿನ ಇಶಾ ಫೌಂಡೇಶನ್ ವತಿಯಿಂದ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಯೋಗಾಭ್ಯಾಸ

ಕಲಬುರಗಿ: 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಿನ ಇಶಾ ಪೌಂಡೇಷನ್ ವತಿಯಿಂದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಪ್ರೋಜೆಕ್ಟರ್ ಸ್ಕ್ರೀನ್ ಮೂಲಕ ಯೋಗದ ಕುರಿತು ಮಾಹಿತಿ ನೀಡುವುದರ ಮೂಲಕ ಎಲ್ಲಾ ಕಾರಾಗೃಹದ ಬಂಧಿಗಳಿಗೆ ಯೋಗಾಭ್ಯಾಸ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಡಾ.ಅನಿತಾ ಆರ್. ಅವರು ಮಾತನಾಡಿ, ಬೆಂಗಳೂರಿನ ಇಶಾ ಪೌಂಡೇಷನ್‍ನ ಯೋಗ ಶಿಕ್ಷಕರು ಯೋಗಾಸನಗಳ ಕುರಿತು ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ಹಾಗೂ ಬಂಧಿಗಳಿಗೆ ತರಬೇತಿ ನೀಡಿದ್ದು, ಮುಂದಿನ ದಿನಗಳಿಗೆ ನಿರಂತರವಾಗಿ ಇಶಾ ಪೌಂಡೇಷನ್ ವತಿಯಿಂದ ಅಧಿಕಾರಿ/ಸಿಬ್ಬಂದಿಗಳಿಗೆ ಹಾಗೂ ಬಂಧಿಗಳಿಗೆ ಒಂದು ವಾರದ ಕೋರ್ಸ್‍ನಂತೆ ತರಬೇತಿ ನೀಡಲು ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಸಂಸ್ಥೆಯ ಅಧೀಕ್ಷಕ ಎಂ.ಹೆಚ್. ಆಶೇಖಾನ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ಎಲ್ಲಾ ಬಂಧಿಗಳು ಅತೀ ಉತ್ಸಾಹದಿಂದ ಈ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದರು. ಬೆಂಗಳೂರಿನ ಇಶಾ ಪೌಂಡೇಷನ್ ಸಂಸ್ಥೆಯ ಯೋಗ ಗುರುಗಳಾದ ಸತೀಶ್‍ಕುಮಾರ ಪಾಟೀಲ್ ಮತ್ತು ಯುವರಾತ್ ಮತ್ತು ರವಿತೇಜ್ ಅವರು ಕಾರಾಗೃಹದ ಅಧಿಕಾರಿ/ಸಿಬ್ಬಂದಿ ಹಾಗೂ ಬಂದಿಗಳು ಸೇರಿದಂತೆ ಒಟ್ಟು 150 ಜನರಿಗೆ ಯೋಗವನ್ನು ಮಾಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಅಧೀಕ್ಷಕ ಚನ್ನಪ್ಪ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಜೈಲರ್‌ಗಳಾದ ಸುನಂದ ವಿ., ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಶಾಮರಾವ ಬಿದ್ರಿ, ಸೇರಿದಂತೆ ಮತ್ತಿತರ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಸಂಸ್ಥೆಯ ಅಧೀಕ್ಷಕ ಎಂ.ಹೆಚ್.ಆಶೇಖಾನ್ ವಂದಿಸಿದರು.