ಕಲಬುರಗಿ| ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಕಲಬುರಗಿ: ನೀಟ್ ಪರೀಕ್ಷೆಯ ಪೇಪರ್ ಸೋರಿಕೆ ಪ್ರಕರಣವನ್ನು ಖಂಡಿಸಿ ಯುವ ಕಾಂಗ್ರೆಸ್ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀನಿವಾಸ್ ರಾಥೋಡ್ ಮಾತನಾಡಿ, “ನೀಟ್ ಪರೀಕ್ಷೆಯ ಪೇಪರ್ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ. ಪರೀಕ್ಷಾ ವ್ಯವಸ್ಥೆಯ ವೈಫಲ್ಯದಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಪ್ರಕರಣದ ಕುರಿತು ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ ಮಾತನಾಡಿ, “ದೇಶದ ಯುವಕರ ಕನಸುಗಳೊಂದಿಗೆ ಆಟವಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ವಿದ್ಯಾರ್ಥಿಗಳ ಶ್ರಮಕ್ಕೆ ನ್ಯಾಯ ದೊರಕಬೇಕು. ನೀಟ್ ಪರೀಕ್ಷಾ ಅವ್ಯವಸ್ಥೆ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು,” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ಕೆಲಕಾಲ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದ್ದು, ಪೊಲೀಸರು ಸ್ಥಳದಲ್ಲಿ ಭದ್ರತೆ ಒದಗಿಸಿದ್ದರು.
ಈ ಸಂದರ್ಭದಲ್ಲಿ ಶಿವಾನಂದ್ ಹೊನಗುಂಟಿ, ಈರಣ್ಣ ಪಾಟೀಲ್ ಜಳಕಿ, ಕಾರ್ತಿಕ್ ನಾಟೇಕರ್, ಫಾರೂಕ್ ಪಟೇಲ್ ಮುದುಬಾಳ, ವಿಘ್ನೇಶ್ವರ ಟೈಗರ್, ಪರಶುರಾಮ್ ನಾಟೀಕರ್, ಅಣವೀರಯ್ಯ ಮಠಪತಿ, ಚಂದ್ರು ಹಡಪದ್, ರಾಜು ಮಾಳಗಿ, ಪ್ರದೀಪ್ ದೊಣ್ಣೂರ್, ಅಸ್ಲಾಂ ಸಿಂದಗಿ, ಆಜ್ಹಾರ್ ಬಾದಾಲ್, ಎಸ್.ಕೆ. ಶೋಯಬ್, ಪ್ರಜ್ಞಾನಂದ ಸಂಗೊಳ್ಳಿ, ಅಸಿಮ್ ಪಟೇಲ್, ಆಮೆರ್ ಮರ್ಚಂಟ್, ಖುರಂ ಕಲ್ಯಾಣಿ ಸೇರಿದಂತೆ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.






