Kalaburagi | 2047ರ ವಿಕಸಿತ ಭಾರತ ನಿರ್ಮಾಣಕ್ಕೆ ಯುವಕರು, ತಂತ್ರಜ್ಞಾನವೇ ಪ್ರಮುಖ ಶಕ್ತಿ : ಪ್ರೊ.ಆರ್.ಆರ್.ಬಿರಾದಾರ್
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್–2026ಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಚಾಲನೆ

ಕಲಬುರಗಿ : ಯುವಶಕ್ತಿ, ತಾಂತ್ರಿಕ ಸಾಮರ್ಥ್ಯ ಮತ್ತು ನಾವೀನ್ಯತೆಯೇ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಪಯಣದ ಪ್ರಮುಖ ಚಾಲಕ ಶಕ್ತಿಗಳಾಗಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ನಿಕಾಯದ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಆಂತರಿಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಹೆಚ್)-2026 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ, ನಾವೀನ್ಯತೆ ಕೋಶ ಹಾಗೂ ಎಐಸಿಟಿಇ ವಿದ್ಯಾರ್ಥಿಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಸಮಸ್ಯೆ ಪರಿಹಾರ ಕೌಶಲ ಬೆಳೆಸಲು ಹಲವು ವೇದಿಕೆಗಳನ್ನು ಕಲ್ಪಿಸುತ್ತಿವೆ. ವಿಶ್ವವಿದ್ಯಾಲಯ ಮಟ್ಟದ ಹ್ಯಾಕಥಾನ್ ರಾಷ್ಟ್ರೀಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗೆ ಆಯ್ಕೆ ಪ್ರಕ್ರಿಯೆಯ ಪ್ರಮುಖ ಹಂತವಾಗಿದ್ದು, ವಿದ್ಯಾರ್ಥಿಗಳಿಗೆ ತಮ್ಮ ನವೀನ ಆಲೋಚನೆಗಳನ್ನು ಪ್ರದರ್ಶಿಸುವ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.
ವಿಕಸಿತ ಭಾರತ@2047 ಗುರಿಯಡಿ ಜ್ಞಾನ, ತಂತ್ರಜ್ಞಾನ ಮತ್ತು ಯುವಜನರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಭಾರತವನ್ನು 30ರಿಂದ 40 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಚ್‌ಸಿ ರೊಬೋಟಿಕ್ಸ್ ನಿರ್ದೇಶಕ ಡಾ. ರಾಧಾಕಿಶೋರ್ ಪಾಂಡುರಂಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಸವಾಲುಗಳನ್ನು ತಂತ್ರಜ್ಞಾನ ಆಧಾರಿತ ನವೀನ ಪರಿಹಾರಗಳ ಮೂಲಕ ಎದುರಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕರೆ ನೀಡಿದರು.
ಗೌರವ ಅತಿಥಿಗಳಾಗಿ ಫ್ಲೈಯೆಟ್ ಸಂಸ್ಥೆಯ ಸ್ಥಾಪಕ ಹಾಗೂ ಸಿಟಿಒ ಸಾಯಿ ವಿಷ್ಣು ವಿಪ್ಪಗುಂಟಾ, ಯುಕೆ ಮೂಲದ ಲಾಯ್ಡ್ಸ್ ಬ್ಯಾಂಕಿಂಗ್ ಗ್ರೂಪ್‌ನ ಡೇಟಾ ಸೈನ್ಸ್ ಇಂಜಿನಿಯರ್ ಅಂಶುಮಾನ್ ದೀಕ್ಷಿತ್ ಮತ್ತು ಪೆರೆನಿಯಲ್ ಸಿಸ್ಟಮ್ಸ್‌ನ ಲೀಡ್ ಎಐ ಇಂಜಿನಿಯರ್ ಶ್ರೀಕಾಂತ್ ಕಸನಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ನಾವೀನ್ಯತೆ ಕುರಿತ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ವಿಜ್ಞಾನ ನಿಕಾಯದ ಡೀನ್ ಪ್ರೊ. ಆರ್.ಎಸ್. ಹೆಗಡಿ, ಎಸ್‌ಐಹೆಚ್ ಸಮಿತಿ ಸದಸ್ಯರು ಹಾಗೂ ಪ್ರಾಧ್ಯಾಪಕರಾದ ಡಾ. ಗುರುರಾಜ ಮುಕರಂಬಿ, ಡಾ. ಕಗಲೆ ಮಾಧುರಿ ರಘುನಾಥ್, ರಾಘವೇಂದ್ರ ಎಂ. ಇಚ್ಚಂಗಿ, ಡಾ. ಮನೋರಂಜನ್ ಗಂಧೂಡಿ, ಡಾ. ಮುದನಾರು ದತ್ತ, ಡಾ. ಶ್ಯಾಮಲಾ, ಡಾ. ಧನಂಜಯ, ಡಾ. ಅಷ್ಟಾ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವು ವಂದೇ ಮಾತರಂ ಗೀತೆಯೊಂದಿಗೆ ಆರಂಭವಾಯಿತು. ವಿಶ್ವವಿದ್ಯಾಲಯದ ಎಸ್‌ಐಹೆಚ್ ಸಂಯೋಜಕ ಡಾ. ರೋಹಿತ್ ಕುಮಾರ್ ಸ್ವಾಗತಿಸಿದರು. ಡಾ. ನೃಸಿಂಘ ಚರಣ್ ಪ್ರಧಾನ್ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.






