ಕಲಬುರಗಿ | ಯುವಕನ ಕೊಲೆ ಪ್ರಕರಣ : ನಾಲ್ವರ ಬಂಧನ

ಬಂಧಿತ ಆರೋಪಿಗಳು
ಕಲಬುರಗಿ: ನಗರದ ಸ್ಟೇಷನ್ ಬಝಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ಟೇಷನ್ ಬಝಾರ್ ಅಪ್ಪರ್ ಲೈನ್ ಹಮಾಲವಾಡಿ ನಿವಾಸಿ ಸೈಯದ್ ಮೆಹಬೂಬ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಅದೇ ನಗರದ ನಿವಾಸಿಗಳಾದ ಆನಂದ ಜಲಕ್ ಸಿಂಧೆ (34), ಆಶಿತೋಷ್ ಜಲಕ್ ಸಿಂಧೆ (30), ಇಮ್ರಾನ್ ಮೆಹಬೂಬ್ ಶೇಖ್ (28) ಹಾಗೂ ಸೊಹೇಬ್ ಅನ್ವರ್ ಖುರೇಷಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಸೈಯದ್ ಮೆಹಬೂಬ್ ಅವರ ತಂದೆ ಸಯ್ಯದ್ ಇಸ್ಮಾಯಿಲ್ ಅವರು ನೀಡಿದ ದೂರಿನ ಮೇರೆಗೆ ಸ್ಟೇಷನ್ ಬಝಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತ್ವರಿತ ತನಿಖೆ ನಡೆಸಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತಾಲಯದ ಕಚೇರಿ ಪ್ರಕಟಣೆಯಲ್ಲಿ ಶ್ಲಾಘಿಸಲಾಗಿದೆ.





