ಕಲಬುರಗಿ | ಯುವ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಕಾರ್ಯಾಧ್ಯಕ್ಷರಿಗೆ ಸತ್ಕಾರ

ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜುಲೈ ಮಾಸಾಂತ್ಯಕ್ಕೆ ನಗರದ ಕನ್ನಡ ಭವನದಲ್ಲಿ ಸೇಡಂನ ಸಾಹಿತಿ ಡಾ.ಜಗನ್ನಾಥ ಎಲ್ ತರನಳ್ಳಿ ಅವರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಜಿಲ್ಲಾ 2ನೇ ಯುವ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ, ಗೌರವಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಜಿಪಂನ ಮಾಜಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ, ಅನ್ನಪೂರ್ಣ ಸಂಗೋಳಗಿ ಹಾಗೂ ಮಲ್ಲಿನಾಥ ನಾಗನಹಳ್ಳಿ ಅವರನ್ನು ರವಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರನ್ನು ಸತ್ಕರಿಸಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.
ಆಹ್ವಾನ ಸ್ವೀಕರಿಸಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ, ನಮ್ಮ ನಾಡು-ನುಡಿ ಮತ್ತು ನೆಲ-ಜಲಗಳ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು. ಪ್ರತಿಯೊಬ್ಬ ಕನ್ನಡಿಗರು ನಾಡಿನ ಸೇವೆಗೆ ಮುಂದಾಗಬೇಕು ಎಂದು ಹೇಳಿದ ಅವರು, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳು ನಮ್ಮ ಅಸ್ಮಿತೆಗಳಾಗಿವೆ. ಅವುಗಳನ್ನು ಬೆಳೆಸುವ ದಿಸೆಯಲ್ಲಿ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಬೇಕಾಗಿದೆ. ಯುವ ಸಾಹಿತ್ಯ ಸಮ್ಮೇಳನವು ಜಿಲ್ಲೆಯ ಯುವ ಬರಹಗಾರರಿಗೆ ಸ್ಪೂರ್ತಿಯಾಗಲಿ. ಪರಿಷತ್ ನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಅವರ ತಂಡ ಇಂಥ ಸಮ್ಮೇಳನ ಆಯೋಜಿಸುವ ಮೂಲಕ ಪರಿಷತ್‌ನ ಕಾರ್ಯ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಗತ್ತಿನ ಭಾಷೆಗಳಲ್ಲಿ ಅತ್ಯಂತ ಶ್ರೇಷ್ಠತೆ ಹೊಂದಿರುವ ನಮ್ಮ ಕನ್ನಡ ಭಾಷೆಯ ಅಸ್ಮಿತೆ ಉಳಿವು ಮತ್ತು ಬೆಳವಣಿಗೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಾಗಿದೆ. ಭಾಷೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಾಂಸ್ಕೃತಿಕ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು. ನಮ್ಮ ಕನ್ನಡ ನೆಲದ ಋಣ ತೀರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ರಚನಾತ್ಮಕವಾದ ಜನಮುಖಿ-ಜೀವಪರವಾಗಿರುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಷತ್ತು ಸಾಮಾನ್ಯ ಜನರ ಬಳಿ ಕೊಂಡೊಯ್ಯುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಶ್ರೀಧರ ನಾಗನಹಳ್ಳಿ, ದಯಾನಂದ ಪಾಟೀಲ, ರಾಜೇಂದ್ರ ಮಾಡಬೂಳ, ಶಿವಾನಂದ ಪೂಜಾರಿ, ವಿನೋದಕುಮಾರ ಜೆ.ಎಸ್., ಪ್ರಭವ ಪಟ್ಟಣಕರ್, ಮಲ್ಲಿನಾಥ ಸಂಗಶೆಟ್ಟಿ, ಈರಣ್ಣ ಸೋನಾರ, ರಮೇಶ ಬಡಿಗೇರ, ಬಿ.ಎಂ.ರಾವ, ರವಿಕುಮಾರ ಶಹಾಪುರಕರ್, ಎಂ.ಎನ್.ಸುಗಂಧಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಸಂಗಣ್ಣ, ಮಧುಸೂಧನ್ ಚಿಂತನಪಳ್ಳಿ, ಮಹೇಶ ಚಿಂತನಪಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







