ಕಲಬುರಗಿ ವಲಯ ಮಟ್ಟದ ಕಾನೂನು ವಿದ್ಯಾರ್ಥಿಗಳ ‘ಮಾದರಿ ವಿಧಾನಸಭೆ ಅಧಿವೇಶನ ಸ್ಪರ್ಧೆ’
ವಿದ್ಯಾರ್ಥಿಗಳು ಕಾನೂನುಗಳ ಮಾಹಿತಿ ಪಡೆದುಕೊಳ್ಳಬೇಕು; ಪಾರಸಮಲ್ ಸುಖಾಣಿ

ರಾಯಚೂರು: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಕಲಬುರಗಿ ವಲಯ ಮಟ್ಟದ ಕಾನೂನು ವಿದ್ಯಾರ್ಥಿಗಳ ‘ಮಾದರಿ ವಿಧಾನಸಭೆ ಅಧಿವೇಶನ ಸ್ಪರ್ಧೆ’ ನಡೆಯಿತು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಾಗೂ ತಾರನಾಥ ಶಿಕ್ಷಣ ಸಂಸ್ಥೆಯ ಸೇಠ್ ಚುನಿಲಾಲ್ ಅಮರಚಂದ್ ಬೊಹರಾ( ಎಸ್ ಸಿಎಬಿ) ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ಸ್ಪರ್ಧೆಯಲ್ಲಿ ಕಲಬುರಗಿ ವಲಯದ 9 ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಮುಖ್ಯಮಂತ್ರಿ, ಸಭಾಧ್ಯಕ್ಷ, ಮಂತ್ರಿಗಳ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದರು.
ರಾಯಚೂರಿನ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಧಾನಸಭಾ ಅಧಿವೇಶನದ ಕಲಾಪಗಳನ್ನು ವೀಕ್ಷಿಸಿ ಹೊಸ ಕಾನೂನುಗಳ ಜಾರಿಯ ಪ್ರಕ್ರಿಯೆ ಪರ-ವಿರೋಧದ ಚರ್ಚೆಗಳ ಬಗ್ಗೆ ಗಮನಿಸಬೇಕು. ಯಾವುದೇ ಸ್ಪರ್ಧೆಯಲ್ಲಿ ನೈಜ ವಿಷಯಗಳಿಗೆ ಧಕ್ಕೆಯಾಗದಂತೆ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ನಿರ್ದೇಶಕ ಪ್ರೊ.ಸಿ.ಎಸ್.ಪಾಟೀಲ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಸಮಾಜದಲ್ಲಿನ ತಪ್ಪುಗಳನ್ನು ಗಮನಿಸಿ ಅವುಗಳನ್ನು ತಿದ್ದುವ ಗುರುತರ ಜವಾಬ್ದಾರಿ ಇದೆ. ವಕೀಲ ವೃತ್ತಿಯೂ ಸ್ವತಂತ್ರವಾದ ವೃತ್ತಿಯಾಗಿದ್ದು, ವೈಯಕ್ತಿಕ ಬೆಳವಣಿಗೆ ತುಂಬಾ ಅವಕಾಶಗಳು ಇದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಮಯದ ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾರನಾಥ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪವನ್ ಕುಮಾರ್ ಸುಖಾಣಿ, ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಕೀಲ ಅಂಬಾಪತಿ ಪಾಟೀಲ್, ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ನಂದಪುರ ಶ್ರೀನಿವಾಸ , ಕಾರ್ಯದರ್ಶಿ ಮೃತ್ಯುಂಜಯ, ತಾರನಾಥ ಶಿಕ್ಷಣ ಸಂಸ್ಥೆಯ ಹಾಗೂ ತಾರನಾಥ ವಿವಿಧ ಕಾಲೇಜುಗಳ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಸ್ ಸಿಎಬಿ ಮಹಾವಿದ್ಯಾಲಯದ ಪ್ರಾಚಾರ್ಯೆ ಪದ್ಮ ಜೆ ಸ್ವಾಗತಿಸಿದರು. ಸಂಯೋಜಕಿ ವಸುಂಧರಾ ಪಾಟೀಲ್ ನಿರೂಪಿಸಿದರು. ಕರ್ನಾಟಕ ಕಾನೂನು ಸಂಸದೀಯ ಸುಧಾರಣಾ ಸಂಸ್ಥೆ ಕರ್ನಾಟಕ ಸುಧಾರಣಾ ಸಂಸ್ಥೆ ಸಂಶೋಧನಾ ಮುಖ್ಯಸ್ಥ ಡಾ. ರೇವಯ್ಯ ಒಡೆಯರ್ ಅವರು ವಂದಿಸಿದರು.







