ಕಲಬುರಗಿಯ ಜಯಶ್ರೀ ರಾಠೋಡಗೆ ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿ

ಬೆಂಗಳೂರು, ಜೂ.13: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ “ಫೋಟೋ ಟುಡೆ–2026” ವಸ್ತುಪ್ರದರ್ಶನದಲ್ಲಿ ಕಲಬುರಗಿಯ ಹಿರಿಯ ಛಾಯಾಗ್ರಾಹಕಿ ಜಯಶ್ರೀ ಗಂಗಾರಾಮ ರಾಠೋಡ ಅವರಿಗೆ ಪ್ರತಿಷ್ಠಿತ ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೋಸಿಯೇಶನ್ (ರಿ.) ಹಾಗೂ ಬೈಸೆಲ್ ಇಂಟರ‍್ಯಾಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಜಯಶ್ರೀ ಗಂಗಾರಾಮ ರಾಠೋಡ ಅವರು ಕಲಬುರಗಿಯ ‘ಅಭಿಷೇಕ್ ವೀಡಿಯೋ ಮಿಕ್ಸಿಂಗ್’ ಸಂಸ್ಥೆಯ ಮಾಲೀಕರಾಗಿದ್ದು, ಹಲವು ವರ್ಷಗಳಿಂದ ಛಾಯಾಚಿತ್ರಣ ಹಾಗೂ ವೀಡಿಯೋ ಮಿಕ್ಸಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ಗಂಗಾರಾಮ ರಾಠೋಡ ಅವರ ಸಹಕಾರದೊಂದಿಗೆ ನೂರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಚಿತ್ರೀಕರಿಸಿ, ಜಿಲ್ಲೆಯ ಛಾಯಾಗ್ರಹಣ ಕ್ಷೇತ್ರದ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಆಳಂದ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪ್ರಕಾಶ ಜಂಗಲೆ ಅವರಿಗೂ ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಬೆಂಜಮಿನ್ ಅವರು ಪ್ರಶಸ್ತಿ ಪ್ರದಾನ ಮಾಡಿ ಸಾಧಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮ್ಯಾನೇಜ್‌ಮೆಂಟ್ ಮ್ಯಾನೇಜರ್ ಕೃಷ್ಣಪ್ಪ, ಗಂಗಾರಾಮ ರಾಠೋಡ, ಪ್ರಕಾಶ ಎಂ. ಶೇರಖಾನೆ, ಶ್ರೀನಿವಾಸ್, ಅಭಿಷೇಕ್, ಅಕ್ಷಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






